ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗದ ಕಾರ್ಬನ್ ಡೇಟಿಂಗ್ ನಡೆಸದಂತೆ ಕೋರ್ಟ್ ತೀರ್ಪು…

41
firstsuddi

ವಾರಣಾಸಿ : ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾಗಿದ್ದ ಶಿವಲಿಂಗದ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸದಂತೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದಿರುವ ಶಿವಲಿಂಗದ ವೈಜ್ಞಾನಿಕ ತನಿಖೆ ಕೋರಿ ಹಿಂದೂಪರ ನಾಲ್ವರು ಮಹಿಳೆಯರು ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಜಯ್ ಕೃಷ್ಣ ಸುಪ್ರೀಂ ಕೋರ್ಟ್ ಶಿವಲಿಂಗ ಪತ್ತೆಯಾದ ಸ್ಥಳವನ್ನು ಸೀಲಿಂಗ್ ಮಾಡಲು ಆದೇಶಿಸಿದ್ದರಿಂದ ವೈಜ್ಞಾನಿಕ ತನಿಖೆಯ ಮನವಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದರು.

ಶಿವಲಿಂಗದ ಕಾರ್ಬನ್ ಡೇಟಿಂಗ್ ಅರ್ಜಿಯ ಕುರಿತು ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ್ ಅವರ ಪೀಠದಲ್ಲಿ ಅಕ್ಟೋಬರ್ 12ರಂದು ವಿಚಾರಣೆ ನಡೆದಿತ್ತು. ವಿಚಾರಣೆಯ ನಂತರ, ಇಂದಿಗೆ ಆದೇಶವನ್ನು ನಿಗದಿಪಡಿಸಲಾಗಿತ್ತು.

ಮುಸ್ಲಿಂ ಪರ ವಾದ ಮಂಡಿಸಿದ ವಕೀಲ ಮುಮ್ತಾಜ್ ಅಹ್ಮದ್, ಯಾವುದೇ ವಸ್ತುವಿನ ಕಾರ್ಬನ್ ಡೇಟಿಂಗ್ ಪ್ರಕ್ರಿಯೆಯ ವೇಳೆ ಆ ವಸ್ತು ಹಾನಿಗೊಳಗಾದರೆ ಅದು ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿದಂತೆ ಆಗುತ್ತದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಆ ಆಕೃತಿಯನ್ನು ಸುರಕ್ಷಿತವಾಗಿಡಲು ಈ ಹಿಂದೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಹಾಗಾಗಿ, ಅದನ್ನು ಅಧ್ಯಯನಕ್ಕೆ ಒಳಪಡಿಸುವುದು ಸರಿಯಲ್ಲ. ಇದರ ಮೂಲ ಪ್ರಕರಣವು ಶೃಂಗಾರ್ ಗೌರಿಯ ಪೂಜೆಗೆ ಸಂಬಂಧಿಸಿದ್ದು ಆದರೆ ಮಸೀದಿಯಲ್ಲಿನ ರಚನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿದ್ದರು.

ಇದಕ್ಕೆ ಪ್ರತಿವಾದ ಮಂಡಿಸಿದ್ದ ಹಿಂದೂ ಆರಾಧಕರ ಪರ ವಕೀಲರಾದ ಹರಿಶಂಕರ್ ಜೈನ್, ವಿಷ್ಣು ಜೈನ್, ಸುಭಾಷ್ ನಂದನ್ ಚತುರ್ವೇದಿ ಮತ್ತು ಸುಧೀರ್ ತ್ರಿಪಾಠಿ ಅವರು, ಮುಸ್ಲಿಮರು ನಮಾಜ್ ಗೂ ಮುನ್ನ ಬಳಸುತ್ತಿದ್ದ ವಝುಖಾನ ಕೊಳದ ಸಮೀಪ ಶಿವಲಿಂಗದ ಆಕೃತಿ ಪತ್ತೆಯಾಗಿತ್ತು. ಆ ಆಕೃತಿಯನ್ನು ಕಾರ್ಬನ್ ಡೇಟಿಂಗ್ ಗೆ ಒಳಪಡಿಸಬೇಕು. ಈ ಮೂಲಕ ಅಲ್ಲಿ ಪತ್ತೆಯಾಗಿದ್ದು ಕಾರಂಜಿಯೋ, ಶಿವಲಿಂಗವೋ ಎಂಬುದನ್ನು ದೃಢಪಡಿಸಬೇಕು ಎಂದು ಮನವಿ ಮಾಡಿದ್ದರು.