ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಬಂದ ನಾಲ್ವರು ದರೋಡೆಕೋರರ ತಂಡ ಹಾಡಹಗಲೇ ಜ್ಯುವೆಲ್ಲರಿ ಶಾಪ್ಗೆ ನುಗ್ಗಿ ಮಾಲೀಕನ ಮೇಲೆ ಗುಂಡು ಹಾರಿಸಿ ದರೋಡೆ ಮಾಡಿರುವ ಘಟನೆ ನಗರದ ಬ್ಯಾಡರಹಳ್ಳಿಯ ಪೈಪ್ಲೈನ್ ರಸ್ತೆಯಲ್ಲಿ ನಡೆದಿದೆ.
ಘಟನೆಯಲ್ಲಿ ಮನೋಜ್ ಎಂಬ ವ್ಯಕ್ತಿಗೆ ಗುಂಡು ತಗುಲಿದೆ. ಎರಡು ಬೈಕ್‍ನಲ್ಲಿ ಮಾರಕಾಸ್ತ್ರಗಳ ಸಹಿತ ಬ್ಯಾಡರಹಳ್ಳಿ ವ್ಯಾಪ್ತಿಯ ವಿನಾಯಕ ಜ್ಯುವೆಲ್ಲರಿ ಶಾಪ್ ಬಳಿ ಬಂದ ಖದೀಮರು, ಮಾಲೀಕ ಮನೋಜ್ ನನ್ನು ಬೆದರಿಸಿ ದರೋಡೆಗೆ ಯತ್ನಿಸಿದ್ದಾರೆ. ಮನೋಜ್ ತಡೆಯುವ ಪ್ರಯತ್ನ ಮಾಡಿದಾಗ ಆತನ ತೊಡೆಗೆ ಗುಂಡು ಹಾರಿಸಿ, ಶಾಪ್‍ನಲ್ಲಿದ್ದ ಒಂದು ಕೆಜಿಯಷ್ಟು ಚಿನ್ನಾಭರಣ ದೋಚಿದ್ದಾರೆ.
ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ. ಸದ್ಯ ಗಾಯಾಳು ಮನೋಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.










