ಬೆಂಗಳೂರು : ವಾಂತಿ ಬೇಧಿಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಜ್ಯೂನಿಯರ್ ಆರ್ಟಿಸ್ಟ್ ಒಬ್ಬರು ಸಾವನ್ನಪ್ಪಿರುವ ಘಟನೆ ನಗರದ ಬಗಲಗುಂಟೆಯಲ್ಲಿ ನಡೆದಿದ್ದು, ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ.
ಸಿಂಚನ (15) ಮೃತ ಬಾಲಕಿ. ಹತ್ತನೇ ತರಗತಿ ಮುಗಿಸಿದ್ದ ಸಿಂಚನಾ ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಹ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ದಿನಗಳಿಂದ ವಾಂತಿ ಬೇಧಿಯಿಂದ ಬಳಲುತ್ತಿದ್ದ ಸಿಂಚನಾಳನ್ನು ಎಸ್.ಕೆ.ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ವೈದ್ಯರ ನಿರ್ಲಕ್ಷ್ಯ ಕಾರಣದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಇತ್ತ ಮತ್ತೊಂದೆಡೆ ಸಿಂಚನಾ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ಎಸ್.ಕೆ.ಹೆಲ್ತ್ ಕೇರ್ ಆಸ್ಪತ್ರೆ ವೈದ್ಯರು ಹೇಳಿಕೆ ನೀಡಿದ್ದಾರೆ. ಈ ಸಾವಿನ ಕುರಿತಂತೆ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.










