ಜ್ಯೂಸ್ ಎಂದು ಕೀಟನಾಶಕ ಸೇವಿಸಿ 2 ವರ್ಷದ ಕಂದಮ್ಮ ಸಾವು!

71
firstsuddi

ರಾಮನಗರ: ಜ್ಯೂಸ್ ಎಂದು ಕೀಟನಾಶಕ ಸೇವಿಸಿ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಭಾನುವಾರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪುಷ್ಪ ಹಾಗೂ ಹನುಮಂತು ಎಂಬವರ ಪುತ್ರ ಎರಡು ವರ್ಷದ ಯಶ್ವಿಕ್ (2) ಕೀಟ ನಾಶಕ ಸೇವಿಸಿ ಮೃತಪಟ್ಟ ಮಗು. ಜಮೀನಿಗೆ ಸಿಂಪಡಿಸಿ ಉಳಿದಿದ್ದ ಕೀಟನಾಶಕವನ್ನ ಹನುಮಂತು ಮನೆಯಲ್ಲಿ ಇಟ್ಟಿದ್ದರು. ಈ ವೇಳೆ ಮಗು ಆಟವಾಡುವಾಗ ಕೀಟನಾಶಕದ ಬಾಟೆಲ್ ನೋಡಿ ಜ್ಯೂಸ್ ಎಂದು ಭಾವಿಸಿ ಕುಡಿದಿದೆ.

ಕೆಲವೇ ನಿಮಿಷಗಳಲ್ಲಿ ಮಗು ಹೊಟ್ಟೆ ನೋವೆಂದು ಅಳಲು ಆರಂಭಿಸಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದೆ. ಕೂಡಲೇ ಪೋಷಕರು ಮಗುವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.