ಹೈದರಾಬಾದ್: ವ್ಯಕ್ತಿಯೊಬ್ಬರು ಝೊಮೆಟೋದಲ್ಲಿ ಆರ್ಡರ್ ಮಾಡಿದ್ದ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ವ್ಯಕ್ತಿಯೊಬ್ಬರು ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದ ಚಿಕನ್ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಅಂಬರ್ಪೇಟೆಯ ಡಿಡಿ ಕಾಲೋನಿಯ ವಿಶ್ವ ಆದಿತ್ಯ ಎಂಬವರು ಫುಡ್ ಡೆಲಿವರಿ ಆಪ್ ಝೊಮೆಟೋದಲ್ಲಿ ಬಿರಿಯಾನಿ ಆರ್ಡರ್ ಮಾಡಿದ್ದರು. ಝೊಮೆಟೋದವರು ಬಿರಿಯಾನಿಯನ್ನು ಮನೆಗೆ ತಲುಪಿಸಿದ್ದರು. ಆದಿತ್ಯ ಪ್ಯಾಕೆಟ್ ಓಪನ್ ಮಾಡಿ ಬಿರಿಯಾನಿ ತಿನ್ನಲು ಮುಂದಾದಾಗ ಅದರಲ್ಲಿ ಸತ್ತ ಹಲ್ಲಿ ಕಂಡುಬಂದಿದೆ.
ಬಿರಿಯಾನಿಯನ್ನು ಆರ್ಟಿಸಿ ಕ್ರಾಸ್ ರಸ್ತೆಯಲ್ಲಿರುವ ಬಾವರ್ಚಿ ಹೋಟೆಲ್ನಿಂದ ಆಹಾರ ಆರ್ಡರ್ ಮಾಡಲಾಗಿತ್ತು. ಅಡುಗೆಯವರ ನಿಷ್ಕಾಳಜಿಯೇ ಇದಕ್ಕೆ ಕಾರಣ ಎಂದು ಆದಿತ್ಯ ಆರೋಪಿಸಿದ್ದಾರೆ. ಬಿರಿಯಾನಿಯಲ್ಲಿ ಹಲ್ಲಿ ಸಿಕ್ಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಬಾವರ್ಚಿ ಹೊಟೇಲ್ ಪ್ಯಾಕೇಜಿಂಗ್ ಸಹ ಕಂಡು ಬರುತ್ತದೆ. ಪ್ಲೇಟ್ನಲ್ಲಿ ಬಿರಿಯಾನಿ ನಡುವೆ ಹಲ್ಲಿ ಇರುವುದು ಕೂಡ ಕಾಣುತ್ತದೆ. ನೆಟ್ಟಿಗರು ಇದನ್ನು ನೋಡಿ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.
ಝೊಮೆಟೋ, ಪೋಸ್ಟ್ಗೆ ಪ್ರತಿಕ್ರಿಯಿಸಿದ್ದು, “ನಾವು ಸಮಸ್ಯೆಯನ್ನು ಗುರುತಿಸಿದ್ದೇವೆ ಮತ್ತು ಗ್ರಾಹಕರೊಂದಿಗೆ ಮಾತನಾಡಿದ್ದೇವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ” ಎಂದು ತಿಳಿಸಿದೆ.










