ಅಂಕಾರ: ವಾಯವ್ಯ ಟರ್ಕಿಯ ಪ್ರಸಿದ್ಧ ಸ್ಕೀ ರೆಸಾರ್ಟ್‍ನಲ್ಲಿ ಮಂಗಳವಾರ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 76 ಮಂದಿ ಮೃತಪಟ್ಟಿದ್ದಾರೆ. ಟರ್ಕಿಯ ಬೋಲು ಪ್ರಾಂತ್ಯದ ಕಾರ್ಟಲ್ಕಾಯಾ ರೆಸಾರ್ಟ್‍ನಲ್ಲಿರುವ 12 ಅಂತಸ್ತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್‍ನ ರೆಸ್ಟೋರೆಂಟ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಂಗಳವಾರ ಬೆಳಗಿನ ಜಾವ 3.30ರ ಸುಮಾರಿಗೆ ಹೋಟೆಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಗೆ ಪ್ರಮುಖ ಕಾರಣ ತಿಳಿದುಬಂದಿಲ್ಲ. ದುರಂತದಲ್ಲಿ ಒಟ್ಟು 76 ಮಂದಿ ಸಾವನ್ನಪ್ಪಿದ್ದು, ಕನಿಷ್ಠ 51 ಮಂದಿ ಗಾಯಗೊಂಡಿದ್ದಾರೆ ಎಂದು ಗೃಹ ಸಚಿವ ಆಲಿ ಎರ್ಲಿಕಯಾ ತಿಳಿಸಿದ್ದಾರೆ. ಘಟನೆ ವೇಳೆ ರೆಸಾರ್ಟ್‍ನಲ್ಲಿದ್ದ ನೂರಾರು ಜನರು ಭಯಭೀತರಾಗಿದ್ದು, ಕೆಲವರು ಕಟ್ಟಡದಿಂದ ಹಾರಿ ಮೃತಪಟ್ಟಿದ್ದಾರೆ. ಘಟನೆ ಸಂದರ್ಭದಲ್ಲಿ 234 ಅತಿಥಿಗಳು ಹೋಟೆಲ್‍ನಲ್ಲಿ ಇದ್ದರು ಎಂದು ಸ್ಥಳೀಯ ಮಾಧ್ಯಮಗಳ ವರದಿಗಳು ತಿಳಿಸಿವೆ. ಕಟ್ಟಡ ಕುಸಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದು ಹೋಟೆಲ್‍ನಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.










