ಟಿಂಬರ್ ಡಿಪೋದಲ್ಲಿ ಬೆಂಕಿ ಅವಘಡ – 11 ಜನರ ಸಜೀವ ದಹನ…

61
firstsuddi

ಹೈದರಾಬಾದ್ : ತೆಲಂಗಾಣದ ಸಿಕಂದರಾಬಾದ್ ನ ಬೋಯಗೂಡದ ಟಿಂಬರ್ ಡಿಪೋದಲ್ಲಿ ಬೆಂಕಿ ದುರಂತ ಸಂಭವಿಸಿದ್ದು, 11 ಜನರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ 11 ಮಂದಿ ಬಿಹಾರ್ ಮೂಲದವರು ಎಂದು ತಿಳಿದುಬಂದಿದೆ.

ಬೆಳಗಿನ ಜಾವ 4 ಗಂಟೆ ಸುಮಾರಿಗೆ ಡಿಪೋದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಸುಮಾರು 12 ಕಾರ್ಮಿಕರು ಮೊದಲನೇ ಮಹಡಿಯಲ್ಲಿ ನಿದ್ರಿಸುತ್ತಿದ್ದರು. ಅದರಲ್ಲಿ ಒಬ್ಬ ಪಾರಾಗಿದ್ದಾನೆ ಎಂದು ಹೇಳಲಾಗಿದೆ. ಕಟ್ಟಿಗೆ ಮತ್ತು ಬಿದಿರುಗಳು ಇರುವುದರಿಂದ ಬೆಂಕಿ ಮುಗಿಲೆತ್ತರಕ್ಕೆ ಚಿಮ್ಮಿದೆ. ಸುದ್ದಿ ತಿಳಿದ ತಕ್ಷಣವೇ ಅಗ್ನಿ ಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾರಂಭಿಸಿತು. ಆದರೆ ಅಷ್ಟೊತ್ತಿಗಾಗಲೇ 11 ಜನರು ಸಜೀವ ದಹನಗೊಂಡಿದ್ದರು. ಓರ್ವ ವ್ಯಕ್ತಿಯನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಸದ್ಯ ಬೆಂಕಿ ಹತೋಟಿಗೆ ಬಂದಿದೆ. ಬೆಂಕಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಎಂಟು ಅಗ್ನಿಶಾಮಕ ಭೇಟಿ ನೀಡಿದ್ದು, ಬೆಳಗ್ಗೆ 7ರ ಸುಮಾರಿಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು. ಇಲ್ಲಿಯವರೆಗೆ 11 ಶವಗಳನ್ನು ತೆಗೆಯಲಾಗಿದೆ. ಮತ್ತೊಬ್ಬ ಕಾರ್ಮಿಕ ಬೆಂಕಿಯಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದು, ಆತನನ್ನು ಗಾಂಧಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನೂ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ನೀಡುವುದಾಗಿ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಘೋಷಣೆ ಮಾಡಿದ್ದಾರೆ.