ಟಿಎಂಸಿ ನಾಯಕನ ಮನೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ – ಮೂವರು ಸಾವು…

64
firstsuddi

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ಭೂಪತಿನಗರ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ಬೂತ್ ಅಧ್ಯಕ್ಷ ರಾಜ್ ಕುಮಾರ್ ಮನ್ನಾ ಅವರ ಮನೆಯಲ್ಲಿ ನಿನ್ನೆ ತಡರಾತ್ರಿ ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಪೂರ್ವಜರ ನಿವಾಸದ ಬಳಿಯೇ ಈ ಸ್ಫೋಟ ಸಂಭವಿಸಿದ್ದು ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಟಿಎಂಸಿ ನಾಯಕ ರಾಜ್‍ಕುಮಾರ್ ಮನ್ನಾ ಅವರ ಮನೆಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದ್ದು, ಸ್ಫೋಟದಲ್ಲಿ ಮೃತಪಟ್ಟ ಮೂವರಲ್ಲಿ ರಾಜ್‍ಕುಮಾರ್ ಮನ್ನಾ ಕೂಡ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಫೋಟದ ಹಿಂದೆ ಟಿಎಂಸಿಯ ಕೈವಾಡವಿದೆ ಎಂದು ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.

ಸ್ಥಳೀಯ ಪೊಲೀಸ್ ಮೂಲಗಳ ಪ್ರಕಾರ, ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಪಕ್ಕದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಸುವೇಂದು ಅಧಿಕಾರಿ ಬಂಗಾಳದಲ್ಲಿ ಟಿಎಂಸಿ ನಾಯಕರ ಮನೆಗಳಲ್ಲಿ ವ್ಯಾಪಕವಾಗಿ ಬಾಂಬ್ ಉತ್ಪಾದಿಸಲ್ಪಡುತ್ತವೆ ಎಂದು ವ್ಯಂಗ್ಯವಾಡಿದ್ದಾರೆ. ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಬಾಂಬ್ ತಯಾರಿಕೆಯು ಬಂಗಾಳದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಏಕೈಕ ಗುಡಿ ಕೈಗಾರಿಕೆಯಾಗಿದೆ ಎಂದು ಹೇಳಿದ್ದಾರೆ.