ಟಿಕೆಟ್ ಕೈತಪ್ಪಿದಕ್ಕಲ್ಲ, ಸ್ವಾಭಿಮಾನಕ್ಕೆ ಧಕ್ಕೆಯಾದ್ದರಿಂದ ಪಾರ್ಟಿ ತೊರೆದಿದ್ದೇನೆ: ಸಂಗಣ್ಣ ಕರಡಿ

8
firstsuddi

ಕೊಪ್ಪಳ: ಪಕ್ಷ ಬಿಡಲು ಟಿಕೆಟ್ ಸಿಗದಿರುವುದು ಕಾರಣವಲ್ಲ. ನನ್ನ ಸ್ವಾಭಿಮಾನಕ್ಕೆ ದಕ್ಕೆಯಾಗಿರುವುದರಿಂದ ಬಿಜೆಪಿ ಪಕ್ಷ ತೊರೆದಿದ್ದೇನೆ ಎಂದು ಸಂಗಣ್ಣ ಕರಡಿ ಹೇಳಿದ್ದಾರೆ.

ಕೊಪ್ಪಳದ ತಮ್ಮ ನಿವಾಸದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವೇಳೆ ‘ಪೂಜಾರಿ ಪಕ್ಷ ಬಿಟ್ಟಿದ್ದಾನೆ, ದೇವರು ಎಲ್ಲಿಯೂ ಹೋಗಿಲ್ಲ’ ಎಂಬ ಸಿ.ಟಿ.ರವಿ ಹೇಳಿಕೆಗೆ ಉತ್ತರಿಸಿದ ಅವರು, “ಯೋಜನೆಗಳೇ ಜಾರಿಯಾಗೋದಾದರೇ ಅಭ್ಯರ್ಥಿಯನ್ನು ಯಾಕೆ ನಿಲ್ಲಿಸಬೇಕಿತ್ತು ಎಂದು ತಿರುಗೇಟು ನೀಡಿದರು.

“2018ರ ಚುನಾವಣೆಯಲ್ಲಿ ಸಿ.ವಿ. ಚಂದ್ರಶೇಖರ ಅವರಿಗೆ ಟಿಕೆಟ್ ಘೋಷಣೆ ಮಾಡಿದಾಗ ನಮ್ಮ ಅಭಿಪ್ರಾಯ ಕೇಳಲಿಲ್ಲ. 2023ರ ಚುನಾವಣೆಯಲ್ಲಿ ನನ್ನ ಹೊರತುಪಡಿಸಿ ಕುಟುಂಬದ ಯಾವ ಸದಸ್ಯರು ಸ್ಪರ್ಧೆ ಮಾಡಬಾರದು ಎಂದು ನಿರ್ಧಾರ ಮಾಡಿದ್ದೆ. ಆದರೆ, ಮಹಿಳಾ ಕೂಟದಲ್ಲಿ ಸೊಸೆಗೆ ಶೋಭಾ ಕರಂದ್ಲಾಜೆ ಅವರು ಟಿಕೆಟ್ ನೀಡುತ್ತೇವೆ ಎಂದು ಹೇಳಿದರು. ಆಗ ನಮಗೆ ಸ್ಪರ್ಧೆ ಮಾಡಬೇಕೆಂಬ ಯಾವ ಉದ್ದೇಶ ಇರಲಿಲ್ಲ. ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಉದ್ದೇಶದಿಂದ ಸೊಸೆ ಮಂಜುಳಾ ಕರಡಿಗೆ ಟಿಕೆಟ್ ನೀಡಿದರು. ಆದರೆ, ಬಿಜೆಪಿಯಲ್ಲಿನ ಕೆಲ ಮುಖಂಡರು ನಮ್ಮಮೇಲೆ ಆರೋಪ ಮಾಡುವ ಮೂಲಕ ಎರಡು ಚುನಾವಣೆಯಲ್ಲಿ ನಮ್ಮನ್ನು ವಿಲನ್ ಮಾಡಿದರು. ಇದಕ್ಕೆ ಮೊದಲು ಸಿ.ಟಿ.ರವಿ ಉತ್ತರ ಕೊಡಲಿ” ಎಂದು ಸವಾಲು ಹಾಕಿದರು.

ಮುಂದುವರೆದು, “ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಿನ್ನೆ ಬೆಂಗಳೂರಿನಲ್ಲಿ ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್ ಸೇರಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ, ಟಿಪ್ಪಣಿ ಸಾಮಾನ್ಯ. ಎಲ್ಲವನ್ನೂ ಸ್ವೀಕರಿಸುವೆ. ಟಿಕೆಟ್ ಸಿಗೋದು, ಸಿಗದೇ ಇರುವುದು ಮುಖ್ಯವಲ್ಲ. ಕುಟುಂಬದಲ್ಲಿ ಸೌಜನ್ಯತೆ ಇಲ್ಲ. ಪಕ್ಷ ಸಂಘಟನೆ, ಅಭಿವೃದ್ಧಿ ಹೇಗೆ ಮಾಡಬೇಕೆಂಬ ಚರ್ಚೆ ಮಾಡದೇ ಇರುವುದು ನೋವುಂಟು ಮಾಡಿದೆ. ಸ್ವಾಭಿಮಾನಕ್ಕೆ ಧಕ್ಕೆಯಾದ್ದರಿಂದ ಪಾರ್ಟಿ ತೊರೆದಿದ್ದೇನೆ. ಟಿಕೆಟ್ ಕೈತಪ್ಪಿದಕ್ಕಲ್ಲ” ಎಂದು ಸ್ಪಷ್ಟಪಡಿಸಿದರು.