ನವದೆಹಲಿ: ದೇಶದ 102 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ಬೆಳಗ್ಗೆ ಆರಂಭವಾಗಿದೆ. 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ.
8.4 ಕೋಟಿ ಪುರುಷರು ಮತ್ತು 8.23 ಕೋಟಿ ಮಹಿಳೆಯರು ಸೇರಿದಂತೆ 16.63 ಕೋಟಿ ಮತದಾರರು 1.87 ಲಕ್ಷ ಮತಗಟ್ಟೆಗಳಲ್ಲಿ ಇಂದು ಮತದಾನ ಮಾಡಲಿದ್ದಾರೆ. ದೇಶಾದ್ಯಂತ 543 ಲೋಕಸಭಾ ಸ್ಥಾನಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತದೆ. ಜೂನ್ 4ರಂದು ಮತ ಎಣಿಕೆ. ಇಂದು ಮೊದಲ ಹಂತಕ್ಕೆ ನಡೆಯುವ ಮತದಾನ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಆದರೂ, ಕೆಲವು ಕ್ಷೇತ್ರಗಳಲ್ಲಿ ಮತದಾನದ ಸಮಯ ಬದಲಾಗಲಿದೆ. ನಿನ್ನೆ ಸಂಜೆಯೇ ಚುನಾವಣಾ ಸಿಬ್ಬಂದಿ ತಮ್ಮತಮ್ಮ ಮತಗಟ್ಟೆಗಳಿಗೆ ಬಂದು ಸೇರಿದ್ದಾರೆ. ಮತದಾನಕ್ಕೆ ಚುನಾವಣಾ ಆಯೋಗ ಭದ್ರತೆ ಸೇರಿ ಸಕಲ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.
ಯಾವ್ಯಾವ ರಾಜ್ಯಗಳಲ್ಲಿ ಏಪ್ರಿಲ್ 19ರಂದು ಮತದಾನ ನಡೆಯಲಿದೆ?
1. ತಮಿಳುನಾಡು: 39
2. ರಾಜಸ್ಥಾನ: 12
3. ಉತ್ತರಾಖಂಡ್: 6
4. ಉತ್ತರಪ್ರದೇಶ: 8
5. ಅಸ್ಸಾಂ: 5
6. ಬಿಹಾರ: 4
7. ಛತ್ತೀಸ್ಗಡ: 1
8. ಜಮ್ಮು ಕಾಶ್ಮೀರ: 1
9. ಮಧ್ಯಪ್ರದೇಶ: 6
10. ಮಹಾರಾಷ್ಟ್ರ: 5
11. ಪಶ್ಚಿಮ ಬಂಗಾಳ: 3
12. ಮಣಿಪುರ್: 2
13. ಮೇಘಾಲಯ: 2
14. ಮಿಝೋರಾಂ: 1
15. ನಾಗಾಲ್ಯಾಂಡ್: 1
16. ಪುದುಚೇರಿ: 1
17. ಸಿಕ್ಕಿಂ: 1
18. ತ್ರಿಪುರಾ: 1
19. ಅಂಡಮಾನ್ ನಿಕೋಬಾರ್: 1 ಸ್ಥಾನ
20. ಅರುಣಾಚಲಪ್ರದೇಶ: 2
21. ಲಕ್ಷದ್ವೀಪ: 1
ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳಲ್ಲೂ ಇಂದೇ ಮತದಾನ ನಡೆಯುತ್ತಿರುವುದು ಗಮನಾರ್ಹ. ಛತ್ತೀಸ್ಗಡದಲ್ಲಿ ಇಂದು ಒಂದೇ ಕ್ಷೇತ್ರಕ್ಕೆ ಚುನಾವಣೆ ಆಗುತ್ತಿದೆ. ನಕ್ಸಲ್ಪೀಡಿತ ಬಸ್ತಾರ್ನಲ್ಲಿ ಮಾತ್ರವೇ ಇದು ವೋಟಿಂಗ್ ಇರುವುದು. ಜಮ್ಮು ಕಾಶ್ಮೀರದಲ್ಲೂ ಉಗ್ರ ಪೀಡಿತ ಉಧಂಪುರ್ನಲ್ಲಿ ಮಾತ್ರ ಇಂದು ಚುನಾವಣೆ ಆಗುತ್ತಿದೆ. ಭದ್ರತಾ ದೃಷ್ಟಿಯಿಂದ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ.
ಮೊದಲ ಹಂತದ ಚುನಾವಣೆಯಲ್ಲಿರುವ ಪ್ರಮುಖ ಅಭ್ಯರ್ಥಿಗಳು:-
ಮಹಾರಾಷ್ಟ್ರದ ನಾಗ್ಪುರದಿಂದ ನಿತಿನ್ ಗಡ್ಕರಿ, ಅರುಣಾಚಲ ಪ್ರದೇಶದ ಪಶ್ಚಿಮ ಕ್ಷೇತ್ರದಿಂದ ಕಿರಣ್ ರಿಜಿಜು, ಬಿಕಾನೇರ್‌ನಿಂದ ಅರ್ಜುನ್ ರಾಮ್ ಮೇಘವಾಲ್, ಅಸ್ಸಾಂನ ದಿಬ್ರುಗಢದಿಂದ ಮಾಜಿ ಸಿಎಂ ಸರ್ಬಾನಂದ ಸೋನೋವಾಲ್, ಪಶ್ಚಿಮ ಉತ್ತರ ಪ್ರದೇಶದ ಮುಜಾಫರ್‌ನಗರದಿಂದ ಸಂಜೀವ್ ಬಲಿಯಾನ್, ಜಮ್ಮು ಮತ್ತು ಕಾಶ್ಮೀರದ ಉಧಂಪುರದಿಂದ ಜಿತೇಂದ್ರ ಸಿಂಗ್ ಮತ್ತು ರಾಜಸ್ಥಾನದ ಅಲ್ವಾರ್‌ನಿಂದ ಭೂಪೇಂದ್ರ ಯಾದವ್ ಅಖಾಡದಲ್ಲಿರುವ ನಾಯಕರಲ್ಲಿ ಪ್ರಮುಖರು.
ಏಳು ಹಂತಗಳ ಚುನಾವಣೆ ದಿನಾಂಕಗಳು:-
ಚುನಾವಣಾ ಆಯೋಗ ಪ್ರಕಟಿಸಿರುವ ವೇಳಾಪಟ್ಟಿ ಪ್ರಕಾರ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 19, 26, ಮೇ 7, 13, 20, 25 ಮತ್ತು ಜೂನ್ 1ರಂದು ವಿವಿಧ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ಆಗಲಿದೆ.










