ಹುಬ್ಬಳ್ಳಿ: ನಗರದ ಪಾಲಿಕೆ ಸದಸ್ಯರೊಬ್ಬರ ಪುತ್ರಿಯನ್ನು ಯುವಕನೊಬ್ಬ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈದಿರುವ ಘಟನೆ ನಗರದ ಬಿವಿಬಿ ಕಾಲೇಜು ಕ್ಯಾಂಪಸ್ನಲ್ಲಿ ನಿನ್ನೆ ಸಂಜೆ ನಡೆದಿದೆ.
ನೇಹಾ ಹಿರೇಮಠ (24) ಕೊಲೆಗೀಡಾದ ಯುವತಿ. ಮೃತ ನೇಹಾ, ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಅವರ ಮಗಳು. ನಗರದ ಬಿವಿಬಿ ಕಾಲೇಜಿನಲ್ಲಿ ಎಂಸಿಎ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಪಾಗಲ್ ಪ್ರೇಮಿ ಫಯಾಜ್, ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾಳನ್ನು ಚಾಕುವಿನಿಂದ ಬರೋಬ್ಬರಿ 10 ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ. ಕೊಲೆಯಾದ ಒಂದೇ ಗಂಟೆಯಲ್ಲಿ ವಿದ್ಯಾನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾಳಿಯಿಂದ ನೇಹಾ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಕೂಡಲೇ ಸ್ಥಳೀಯ ಸಹಪಾಠಿಗಳು ಹಾಗೂ ಕಾಲೇಜಿನ ಸಿಬ್ಬಂದಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ನೇಹಾ ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಈ ಪ್ರಕರಣವನ್ನು ಖಂಡಿಸಿ ಎಬಿವಿಪಿ ಸಂಘಟನೆ ಪ್ರತಿಭಟನೆ ನಡೆಸಿದೆ. ಅಲ್ಲದೇ ಈ ಪ್ರಕರಣ ಸಂಬಂಧ ಬಿಜೆಪಿ, ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದೀಗ ಈ ಪ್ರಕರಣ ರಾಜಕೀಯ ಮಾತ್ರವಲ್ಲದೇ ಹಿಂದೂ-ಮುಸ್ಲಿಂ ತಿರುವು ಪಡೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಇದಕ್ಕೆ ಪೂರಕವೆಂಬಂತೆ ಎಬಿವಿಪಿ, ಹಿಂದೂ ಸಂಘಟನೆ ಪ್ರತಿಭಟನೆಗಿಳಿದಿದ್ದು, ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸುತ್ತಿವೆ.










