ಗದಗ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ…

37
firstsuddi

ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ದಾಸರ ಓಣಿಯಲ್ಲಿ ತಡರಾತ್ರಿ ನಡೆದಿದೆ.

ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಆತನ ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಗೀಡಾದವರು. ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಅವರ ಮದುವೆ ತಯಾರಿ ಸಂಬಂಧ ಏಪ್ರಿಲ್ 17 ರಂದು ಸಂಬಂಧಿಕರಾದ ಪರಶುರಾಮ, ಪತ್ನಿ ಲಕ್ಷ್ಮೀ, ಪುತ್ರಿ ಆಕಾಂಕ್ಷಾ ಕೊಪ್ಪಳದಿಂದ ಗದಗ ನಗರಕ್ಕೆ ಆಗಮಿಸಿದ್ದಾರೆ. ನಿನ್ನೆ ರಾತ್ರಿ ಆಕಾಂಕ್ಷಾ ಹುಟ್ಟು ಹಬ್ಬವನ್ನು ಕುಟುಂಬಸ್ಥರು ಆಚರಿಸಿದ್ದಾರೆ. ಬಳಿಕ ಪರಶುರಾಮ ಕುಟುಂಬಸ್ಥರು ಮನೆಯ ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿದ್ದರು.

ತಡರಾತ್ರಿ ಪರಶುರಾಮ ಕುಟುಂಬ ಮಲಗಿದ್ದ ಕೋಣೆಯ ಗಾಜಿನ ಕಿಟಕಿಯನ್ನು ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು ಮೂವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕಿಟಿಕಿ ಒಡೆದ ಮತ್ತು ಕಿರಿಚಾಟದ ಸದ್ದು ಕೇಳಿ ಏನಾಯಿತೆಂದು ಕೆಳಗಿನ ಕೋಣೆಯಲ್ಲಿ ಮಲಗಿದ್ದ ಕಾರ್ತಿಕ್ ಬಾಕಳೆ ನೋಡಲು ಮೇಲೆ ಹೋಗಿದ್ದಾರೆ. ಆಗ ದುಷ್ಕರ್ಮಿಗಳು ಕಾರ್ತಿಕ್​ನನ್ನೂ ಕೊಲೆ ಮಾಡಿದ್ದಾರೆ. ಬಳಿಕ ದುಷ್ಕರ್ಮಿಗಳು ಮನೆಯ ಮಾಲೀಕ ಪ್ರಕಾಶ್ ಬಾಕಳೆ ಮತ್ತು ಪತ್ನಿ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರು ಮಲಗಿದ್ದ ಕೋಣೆಯ ಬಾಗಿಲನ್ನು ತಟ್ಟಿದ್ದಾರೆ.

ಆದರೆ ದಂಪತಿ ಬಾಗಿಲು ತೆಗೆಯದೆ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಪೊಲೀಸರಿಗೆ ಫೋನ್ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ದುಷ್ಕರ್ಮಿಗಳು ಚರಂಡಿಯಲ್ಲಿ ಬಿಸಾಕಿದ್ದಾರೆ. ಸ್ಥಳಕ್ಕೆ ಶ್ವಾನದಳ, ವಿಧಿವಿಜ್ಞಾನ ಪ್ರಯೋಗಾಲಯ ತಂಡ, ಎಸ್‍ಪಿ ಬಿಎಸ್ ನೇಮಗೌಡ, ಹೆಚ್ಚುವರಿ ಎಸ್‍ಪಿ ಎಂ.ಬಿ ಸಂಕದ, ಡಿವೈಎಸ್‍ಪಿ, ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಸಂಬಂಧ ಗದಗ ಶಹರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.