ಟೈಗರ್ಸ್ ಕಲ್ಲೇಗ ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆ…

54
firstsuddi

ಪುತ್ತೂರು: ಇಲ್ಲಿನ ನೆಹರೂ ನಗರದಲ್ಲಿ ದುಷ್ಕರ್ಮಿಗಳ ತಂಡವೊಂದು ಟೈಗರ್ಸ್ ಕಲ್ಲೇಗ ತಂಡದ ಸಾರಥ್ಯ ವಹಿಸಿದ್ದ ಅಕ್ಷಯ್ ಕಲ್ಲೇಗ (26) ರನ್ನು ತಲವಾರಿನಿಂದ ಕೊಚ್ಚಿ ಕೊಲೆಗೈದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಅಕ್ಷಯ್ ಕಲ್ಲೇಗ ಕಳೆದ 6 ವರ್ಷಗಳಿಂದ ಕಲ್ಲೇಗ ಟೈಗರ್ಸ್ ಎಂಬ ಹುಲಿವೇಷ ತಂಡವನ್ನು ಮುನ್ನಡೆಸುತ್ತಿದ್ದರು. ಮೃತ ಅಕ್ಷಯ್ ತಂದೆ, ತಾಯಿ ಹಾಗೂ ಇಬ್ಬರು ಸಹೋದರನನ್ನು ಅಗಲಿದ್ದಾರೆ.

ಕ್ಷುಲ್ಲಕ ಕಾರಣವೊಂದಕ್ಕೆ ಅಕ್ಷಯ್ ಹಾಗೂ ಕೃತ್ಯ ಎಸಗಿದ ತಂಡದ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಅದರ ಮುಂದುವರಿದ ಭಾಗವಾಗಿ ಅಕ್ಷಯ್ ನನ್ನು ನೆಹರೂ ನಗರಕ್ಕೆ ಬರಲು ಹೇಳಿ ಹತ್ಯೆ ನಡೆಸಿದ್ದಾರೆ ಎನ್ನಲಾಗಿದೆ. ನೆಹರೂ ನಗರದಿಂದ ವಿವೇಕಾನಂದ ಕಾಲೇಜಿಗೆ ತೆರಳುವ ರಸ್ತೆಯಲ್ಲಿ ಹೆದ್ದಾರಿಯಲ್ಲಿ ತುಸು ದೂರದಲ್ಲಿನ ಕೆನರಾ ಬ್ಯಾಂಕ್ ಎಟಿಎಂ ಬಳಿ ಅಕ್ಷಯ್ ಮೇಲೆ ತಂಡ ದಾಳಿ ನಡೆಸಿದ್ದು, ಅಲ್ಲಿಂದ ಆತನನ್ನು ಅಟ್ಟಾಡಿಸಿಕೊಂಡು ಬಂದು ತಲವಾರಿನಿಂದ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಪುತ್ತೂರಿನ ಕಲ್ಲೇಗ ಟೈಲರ್ ಮುಖ್ಯಸ್ಥ ಅಕ್ಷಯ್ ಕಲ್ಲೇಗನನ್ನು ಮಚ್ಚಿನಿಂದ ಕಡಿದು ಹತ್ಯೆ ಮಾಡಿದ ಬೆನ್ನಲ್ಲೇ ಆರೋಪಿಗಳಾದ ಬನ್ನೂರು ನಿವಾಸಿ ಮನೀಷ್ ಮತ್ತು ಚೇತು ಪೊಲೀಸ್ ಠಾಣೆಗೆ ಶರಣಾಗಿದ್ದು, ಮತ್ತೋರ್ವ ಆರೋಪಿ ತಲೆಮಲೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಠಾಣಾ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.