ದಾವಣಗೆರೆ: ಟೊಮೆಟೊ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಇಳಿಕೆ ಕಂಡಿದ್ದು, ರೈತರನ್ನು ಕಂಗಲಾಗಿಸಿದೆ. ಕೆಲ ದಿನಗಳ ಹಿಂದೆ ಟೊಮೆಟೊ ದರ ಏರಿಕೆ ಕಂಡ ಬೆನ್ನಲ್ಲೇ ಮಾಯಕೊಂಡ ಭಾಗದ ರೈತರು ನೂರಾರು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು. ಏಕಾಏಕಿ ಟೊಮೆಟೊ ಬೆಲೆ ಕುಸಿದಿದ್ದರಿಂದ ರೈತರನ್ನು ಕಂಗಲಾಗಿಸಿದೆ. ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯಲ್ಲಿ ಟೊಮೆಟೊ ಬೆಳೆ ಹೆಚ್ಚಾಗಿ ಬೆಳೆಯುತ್ತಾರೆ. ಮಾಯಕೊಂಡ ಸುತ್ತಮುತ್ತಲಿನ ಬಹುತೇಕ ಗ್ರಾಮದ ಜಮೀನುಗಳಲ್ಲಿ ರೈತರು ಬೆಳೆಯುವ ಟೊಮೆಟೊವನ್ನು ರಾಷ್ಟ್ರೀಯ ಮಟ್ಟದಲ್ಲಿ ರಫ್ತು ಮಾಡಿರುವ ಹೆಗ್ಗಳಿಕೆ ಇದೆ. ದರ ಹೆಚ್ಚಿರುವುದನ್ನು ಮನಗಂಡ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಹೆಚ್ಚಾಗಿ ಟೊಮೆಟೊ ಹಾಕಿದ್ದರು. ದಾವಣಗೆರೆ ತಾಲೂಕಿನ ಮಾಯಕೊಂಡ, ಕೊಡಗನೂರು, ಸುಲ್ತಾನಿ ಪುರ, ನೇರ್ಲಿಗೆ, ಹೊನ್ನನಾಯಕನಹಳ್ಳಿ, ಮುಂತಾದ ಗ್ರಾಮದ ಜಮೀನುಗಳಲ್ಲಿ 100 – 200 ಎಕರೆಯಲ್ಲಿ ರೈತರು ಟೊಮೆಟೊ ಬೆಳೆದಿದ್ದಾರೆ. ಬೆಲೆ ಕುಸಿತ ಕಂಡ ಬೆನ್ನಲ್ಲೇ ಟೊಮೆಟೊ ಮಾರುಕಟ್ಟೆಗೆ ಕೊಂಡೊಯ್ಯಲು ಹಿಂದೇಟು ಹಾಕುವಂತಾಗಿದೆ. ಒಂದು ಎಕರೆಗೆ 80 – 90 ಸಾವಿರ ವ್ಯಯ ಮಾಡಿ ರೈತರು ಟೊಮೆಟೊ ಬೆಳೆದಿದ್ದರು. ಇದೀಗ ಬೆಲೆ ಇಲ್ಲದೇ ಇರುವುದು ರೈತರು ಸಾಲದ ಸುಳಿಯಲ್ಲಿ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ.










