ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸಿಎಂ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮಾಜಿ ನಾಯಕ, ಬಿಜೆಪಿ ಎಂಎಲ್‍ಸಿ ಎ.ಎಚ್ ವಿಶ್ವನಾಥ್ ಅವರು ಬುಧವಾರ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆಶಿ ಯವರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಾರರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಎಂದು ಎನ್ನಲಾಗುತ್ತಿದೆ. ಇದೆಲ್ಲಾ ಬಾಲಿಶತನ, ಮೂರ್ಖತನ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನ ಗೆಲ್ಲಲು ಡಿಕೆಶಿ ಅವರ ಕೊಡುಗೆ ಬಹಳಷ್ಟಿದೆ. ಅವರದು ಸಾಕಷ್ಟು ಖರ್ಚಾಗಿದೆ. ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯ ಕುರಿತು ಮಾತುಕತೆಯಾಗಿತ್ತು. ಹೀಗಾಗಿ ಮುಂದೆ ಡಿ.ಕೆ.ಶಿವಕುಮಾರ್ ಸಿಎಂ ಆಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರಲ್ಲ. ಅವರಿಗೆ ಏನು ಆಗಬೇಕೊ ಅದು ಆಗಿದೆ. ಕಾಂಗ್ರೆಸ್ ಪಕ್ಷದ ಘನತೆ ಹಾಗೂ ಖ್ಯಾತಿಯನ್ನು ಕಟ್ಟಿಕೊಂಡು ಅವರಿಗೇನು ಆಗಬೇಕು. ಈ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರ ಹಿಂದೆ ಸಿದ್ದರಾಮಯ್ಯನವರಿರುವುದು ಖಚಿತ. ಮಂತ್ರಿಗಳು ನೆಪಮಾತ್ರ ಎಂದು ಹೇಳಿದರು.









