ರಾಮನಗರ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಹೈಕೋರ್ಟ್‍ನಿಂದ ರಿಲೀಫ್ ಸಿಕ್ಕಿಲ್ಲ, ಇವರೇ ತೆಗೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ವಿಚಾರ ಕುರಿತು ಚನ್ನಪಟ್ಟಣ ಚಿಕ್ಕನದೊಡ್ಡಿ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸ್ವಲ್ಪ ದಿನ ಇದನ್ನ ಮುಂದಕ್ಕೆ ಎಳೆಯಬೇಕಲ್ಲ. ಬಹುಶಃ ಗ್ಯಾರಂಟಿ ಕಾರ್ಯಕ್ರಮದ ಮೂಲಕ ದೇಶದಲ್ಲಿ ಅಧಿಕಾರಕ್ಕೆ ಬಂದುಬಿಡ್ತೀವಿ. ಅಧಿಕಾರಕ್ಕೆ ಬಂದಮೇಲೆ ಎಲ್ಲಾ ಕೇಸ್‍ಗಳನ್ನ ಮುಚ್ಚಿಹಾಕಬಹುದು ಅಂತಾ ಐದಾರು ತಿಂಗಳು ಮುಂದೂಡ್ತಿದ್ದಾರೆ. ಇದೆಲ್ಲಾ ಅವರ ತಂತ್ರಗಾರಿಕೆ ಅಷ್ಟೇ. ಅದು ಮುಂದೆ ಏನೇನಾಗುತ್ತೋ ನೋಡೋಣ ಎಂದು ಹೆಚ್‍ಡಿಕೆ ವಾಗ್ದಾಳಿ ನಡೆಸಿದ್ದಾರೆ.
ನಾನು ವಕೀಲನಾಗಿರುವುದಕ್ಕೆ ಕೇಸ್ ವಾಪಸ್ ತೆಗೆದುಕೊಂಡಿದ್ದು ಎಂಬ ಸಿಎಂ ಸಿದ್ದು ಹೇಳಿಕೆಗೆ ವ್ಯಂಗ್ಯವಾಡಿದ ಹೆಚ್‍ಡಿಕೆ, ಅವರು ದೊಡ್ಡ ವಕೀಲರು ಅಂತ ಗೊತ್ತು ನನಗೆ. ಇವರೊಬ್ಬರೇ ಕಾನೂನು ತಿಳಿದುಕೊಂಡಿದ್ದಾರಲ್ವಾ. ಅದಕ್ಕೆ ಅರ್ಕಾವತಿ ಡಿನೋಟಿಫಿಕೇಷನ್ ತೆಗೆದು ರಿಡೋ ಮಾಡಿದ್ರಿ. ಕೆಂಪಣ್ಣನ ಆಯೋಗ ಮಾಡಿ ಉಳಿದುಕೊಂಡ್ರಲ್ಲ. ಆ ರೀತಿಯ ವಕೀಲರು ಇವರು. ಜನಸಾಮಾನ್ಯರಿಗೆ ಒಂದು ನ್ಯಾಯ, ಇವರಿಗೊಂದು ನ್ಯಾಯ. ಆ ವಕೀಲಿಕೆಲಿಯಲ್ಲಿ ಇವರು ಬುದ್ದಿವಂತರಿದ್ದಾರೆ. ಎಸಿಬಿ ರಚನೆ ಮಾಡಿ, ಇವರ ಮೇಲೆ ಬಂದ ಕೇಸ್ ಗಳನ್ನ ಮುಚ್ಚಿಹಾಕಿಕೊಂಡ್ರು ಎಂದು ಕಿಡಿಕಾರಿದರು.










