ಕೊಪ್ಪಳ: ಗಣೇಶ ವಿಸರ್ಜನೆ ವೇಳೆ ಡಿಜೆ ಸೌಂಡ್‌ಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ.
ಸುದೀಪ್ ಸಜ್ಜನ್ (30) ಮೃತ ಯುವಕ. ಈತನಿಗೆ ಡಿಜೆ ಸೌಂಡ್ ಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ 21 ದಿನದ ಗಣೇಶ ವಿಸರ್ಜನೆ ನಡೆದಿದೆ. ಗಂಗಾವತಿಯ ಪ್ರಶಾಂತ ನಗರದ ಯುವಕರಿಂದ ಡಿಜೆ ಮೆರವಣಿಗೆ ಆಯೋಜನೆ ಮಾಡಲಾಗಿತ್ತು. ಅಂತೆಯೇ ಬೆಳ್ಳಂಬೆಳಗ್ಗೆ ಮೆರವಣಿಗೆ ಸಂದರ್ಭದಲ್ಲಿ ಡಿಜೆ ಸೌಂಡ್ ಹಾಕಿ ಡ್ಯಾನ್ಸ್ ಮಾಡಲಾಗುತ್ತಿತ್ತು.
ಮೆರವಣಿಗೆ ಸಾಗುತ್ತಿದ್ದ ವೇಳೆ ಸುದೀಪ್ ಡ್ಯಾನ್ಸ್ ಮಾಡುತ್ತಿದ್ದು, ಕೆಲ ಹೊತ್ತಿನ ಬಳಿಕ ಕುಸಿದು ಬಿದ್ದಿದ್ದಾನೆ. ಘಟನೆಯಿಂದ ಸ್ವಯಂ ಪ್ರೇರಿತವಾಗಿ ಯುವಕರು ಅರ್ಧಕ್ಕೆ ಡಿಜೆ ಬಂದ್ ಮಾಡಿದ್ದಾರೆ.
ಯುವಕನ ಮೃತದೇಹವನ್ನ ಗಂಗಾವತಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಂಗಾವತಿ ನಗರ ಠಾಣೆ ಪೊಲೀಸರು ಡಿಜೆ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










