ಮೈಸೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಚುನಾವಣೆಯಲ್ಲೂ ಗೂಂಡಾಗಿರಿ ಮೂಲಕ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರದ್ದು ಯಾವಾಗಲೂ ಗೂಂಡಾ ರಾಜಕಾರಣ. ಆರ್.ಆರ್. ನಗರದಲ್ಲಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಶಿವಕುಮಾರ್ ಅವರೇ ಸಂಸದರು. ಎಲ್ಲಾ ಗೂಂಡಾಗಳನ್ನು ಬಳಸಿಕೊಂಡು ಕಾನೂನು ಸುವ್ಯವಸ್ಥೆ ಕೆಡಿಸುವ ಯತ್ನ ಮಾಡುತ್ತಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೂ ಮನವಿ ಸಲ್ಲಿಸಿದ್ದೇವೆ. ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆಯಲು ಅವಕಾಶ ಕೊಡಬಾರದು. ಕಾಂಗ್ರೆಸ್ ನವರು ಎಲ್ಲಾ ಸಂದರ್ಭದಲ್ಲೂ ಗುದ್ದಾಟ ಮಾಡುತ್ತಾರೆ. ಈಗ ಪಕ್ಷದ ಅಸ್ಥಿತ್ವಕ್ಕಾಗಿ ಗುದ್ದಾಟ ನಡೆಸುತ್ತಿದ್ದಾರೆ ಎಂದು ವಗ್ದಾಳಿ ನಡೆಸಿದರು.
ಇದೇ ವೇಳೆ ಉಚಿತ ಕೊರೊನಾ ಲಸಿಕೆ ನೀಡುವ ಕುರಿತು ಮಾತನಾಡಿದ ಅವರು, ಅಧಿಕಾರದಲ್ಲಿ ನಮ್ಮದೇ ಸರ್ಕಾರ ಇದ್ದು, ದೇಶದ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ನೀಡುವುದು ನಮ್ಮ ಉದ್ದೇಶ. ಇದಕ್ಕಾಗಿ ಸರ್ಕಾರ ಹಣ ಹೂಡಿಕೆ ಮಾಡುತ್ತಿದೆ ಆದಷ್ಟು ಬೇಗ ರಾಜ್ಯದ ಜನತೆಗೆ ಕೊರೊನಾ ಲಸಿಕೆ ಸಿಗುತ್ತದೆ ಎಂದರು.










