ಮಂಡ್ಯ : ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಸಂದರ್ಭ ಕಲಾವಿದರತ್ತ 500 ರೂಪಾಯಿಗಳ ನೋಟು ಎಸೆದ ಆರೋಪದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಮಾರ್ಚ್ 28ರಂದು ಶ್ರೀರಂಗಪಟ್ಟಣ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಆಯೋಜನೆಗೊಂಡಿತ್ತು. ಮಂಡ್ಯ ತಾಲೂಕಿನ ಕ್ಯಾತುಂಗೆರೆಯಿಂದ ಡಿ.ಕೆ ಶಿವಕುಮಾರ್ ರೋಡ್ ಶೋ ಆರಂಭಿಸಿದ್ದರು. ಈ ವೇಳೆ ಜಾನಪದ ಕಲಾ ತಂಡಗಳ ಕಲಾವಿದರು ಡಿಕೆಶಿ ಅವರನ್ನು ಹಣ ಕೊಡುವಂತೆ ಕೋರಿದ್ದರು. ಈ ಸಂದರ್ಭದಲ್ಲಿ ಅವರು ವಾಹನದ ಮೇಲಿಂದ ಕಲಾವಿದರತ್ತ 500 ರೂಪಾಯಿಗಳ ನೋಟುಗಳನ್ನು ಎಸೆದಿದ್ದರು. ಹಣ ಎಸೆಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಸಂಬಂಧ ಚುನಾವಣಾ ಅಧಿಕಾರಿ ಜೆಎಂಎಫ್‍ಸಿ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ದೂರು ಬಳಿಕ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡಿದ್ದು, ನ್ಯಾಯಾಲಯದ ಆದೇಶದಂತೆ ನಿನ್ನೆ ಡಿಕೆಶಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.










