ದಾವಣಗೆರೆ: ಕೆಲ ದಿನಗಳ ಹಿಂದೆ ಭಾರೀ ಚರ್ಚೆಯಾಗಿದ್ದ ಹುಲಿ ಉಗುರು ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಏಳು ಜನ ಅರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಶೋಕ್ ಕುಮಾರ್ (27), ಲೋಕೇಶ್ (40), ಕಾರ್ತಿಕ್ (32), ನೌರತನ್(34), ರಾಜಸ್ಥಾನ ಮೂಲದ ರಮೇಶ್ ಕುಮಾರ್ (39) ಸುನೀಲ್ ಕುಮಾರ್ (28) ಹಾಗೂ ಬೆಂಗಳೂರು ಕೊಡಿಗೆಹಳ್ಳಿ ಸ್ಟ್ರೀಲ್ ಸ್ಕ್ರ್ಯಾಪ್ ವ್ಯಾಪಾರಿ ಅಶೋಕ್ ಕುಮಾರ(23) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಆರು ಹುಲಿ ಉಗುರು, 49 ಗ್ರಾಂ. ಎಂಡಿಎಂಎ ಮಾದಕ ವಸ್ತು, ನಾಲ್ಕು ಮೊಬೈಲ್ ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲೆಯ ಮಲ್ಲಿಕಾರ್ಜುನಪ್ಪ ಬಡಾವಣೆಯ ಎನ್ಎಚ್ 48 ಸರ್ವೀಸ್ ರಸ್ತೆ ಕಡೆಯಿಂದ ಮಯೂರ ಗ್ಲೋಬಲ್ ಶಾಲೆ ಕಡೆಗೆ ಹೋಗುವ ಮಾರ್ಗದಲ್ಲಿ ಮಾದಕ ವಸ್ತು ಮಾರುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಸಿಇಎನ್ ಠಾಣೆ ಇನ್ಸ್‌ಪೆಕ್ಟರ್ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಈ ವಸ್ತುಗಳು ಹೇಗೆ ಸಿಕ್ಕವು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಗುಂಪಿನಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ತನಿಖೆ ಬಳಿಕ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸಿಇಎನ್ ಠಾಣೆಯಲ್ಲಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.










