ಮೈಸೂರು: ತಂದೆ ಸಿದ್ದರಾಮಯ್ಯ ಅವರಿಗಾಗಿ ತಮ್ಮ ವರುಣಾ ಕ್ಷೇತ್ರವನ್ನೇ ತ್ಯಾಗ ಮಾಡಲು ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ. ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗಾಗಿ ವರುಣಾ ಕ್ಷೇತ್ರವನ್ನು ಬಿಟ್ಟು ಕೊಡುತ್ತೇನೆ. ಜನ ಪಕ್ಷ ಅಪೇಕ್ಷಿಸಿದರೆ ಸಿದ್ದರಾಮಯ್ಯ ವರುಣಾದಲ್ಲಿಯೇ ಸ್ಪರ್ಧೆ ಮಾಡಲಿ. ನಾನು ಅವರ ಬೆಂಬಲಕ್ಕೆ ನಿಂತು ಅವರ ಗೆಲುವಿಗೆ ಶ್ರಮಿಸುತ್ತೇನೆ. ನಾನು ಬೇರೆ ಯಾವ ಕ್ಷೇತ್ರದಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ. ಬದಲಾಗಿ ಸಿದ್ದರಾಮಯ್ಯ ಗೆಲ್ಲಿಸುವ ಕೆಲಸ ಮಾಡುತ್ತೇನೆ. ಅದು ನನ್ನ ಕರ್ತವ್ಯ ಎಂದರು.
ಸಿದ್ದರಾಮಯ್ಯ ವರುಣಾಗೆ ಬಂದ ತಕ್ಷಣ ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುತ್ತೇನೆ ಎಂಬುದು ಸುಳ್ಳು. ಆತರದ ಯಾವ ಚಿಂತನೆಯನ್ನು ಮಾಡಿಲ್ಲ. ಕ್ಷೇತ್ರದ ಆಯ್ಕೆ ವಿಚಾರಕ್ಕೆ ಇನ್ನೂ ಬಹಳಷ್ಟು ಸಮಯ ಇದೆ. ಬಹಳಷ್ಟು ಕ್ಷೇತ್ರಗಳಿಂದ ಸಿದ್ದರಾಮಯ್ಯ ಗೆ ಆಹ್ವಾನ ಇದೆ. ಸಿದ್ದರಾಮಯ್ಯ ಮತ್ತು ಪಕ್ಷದ ಹೈಕಮಾಂಡ್ ಅಳೆದು ತೂಗಿ ಕ್ಷೇತ್ರ ಆಯ್ಕೆ ಮಾಡಿಕೊಳ್ತಾರೆ. ಕ್ಷೇತ್ರದ ಆಯ್ಕೆ ಬಗ್ಗೆ ತುರ್ತಾಗಿ ಚರ್ಚೆ ಮಾಡಿಲ್ಲ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಹೇಳಿದ್ದಾರೆ.
ಸಿದ್ದರಾಮೋತ್ಸವದ ಬಗ್ಗೆ ಮಾತಾಡಿದ ಪುತ್ರ ಡಾ. ಯತೀಂದ್ರ, ಇದು ಶಕ್ತಿ ಪ್ರದರ್ಶನ ಅಲ್ಲ, ಇದು ಕೇವಲ ತಂದೆಯ ಹುಟ್ಟುಹಬ್ಬದ ಅಮೃತ ಮಹೋತ್ಸವ ಅಷ್ಟೇ. ಇದರಲ್ಲಿ ರಾಜಕೀಯ ಹುಡುಕಬೇಡಿ. ಕಾಕತಾಳಿಯವಾಗಿ ಚುನಾವಣೆಯ ವರ್ಷವೇ ಅವರ ಅಮೃತ ಮಹೋತ್ಸವ ಬಂದಿದೆ. ಹೀಗಾಗಿ ಈ ವಿಚಾರ ಚರ್ಚೆಯಾಗುತ್ತಿದ್ದೆ. ಎಲ್ಲಾ ಪಕ್ಷದವರನ್ನೂ ಸೇರಿಸಿಕೊಂಡು ಅಮೃತ ಮಹೋತ್ಸವ ಆಚರಿಸಿದರೆ ರಾಜಕೀಯವಾಗಿ ಬೇರೆ ರೀತಿಯ ಚರ್ಚೆಗಳು ಆಗುತ್ತೆ. ಹೀಗಾಗಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಈ ಸಮಾರಂಭ ಆಯೋಜಿಸುತ್ತಿದ್ದೇವೆ. ಸಿಎಂ ಸ್ಥಾನದ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳುವ ಪ್ರಶ್ನೆಯೇ ಇದರಲ್ಲಿ ಇಲ್ಲ ಎಂದು ಹೇಳಿದ್ದಾರೆ.










