ತಮಿಳನಾಡಿನಲ್ಲಿ ಧಾರಾಕಾರ ಮಳೆ – ರೆಡ್ ಅಲರ್ಟ್ ಘೋಷಣೆ…

69
firstsuddi

ಚೆನ್ನೈ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಆರು ವರ್ಷಗಳ ಬಳಿಕ ತಮಿಳುನಾಡಿನಲ್ಲಿ ಭಾರಿ ಮಳೆಯಾಗಿದ್ದು, ವಾಹನ ಸವಾರರು ತೀವ್ರ ಪರದಾಟ ಪಡುತ್ತಿದ್ದಾರೆ. ಚೆಂಬರಂ ಬಾಕ್ಕಂ, ಪೊಂಡಿ, ಪುಳಲ್ ಡ್ಯಾಂಗಳು ಭರ್ತಿಯಾದ ಹಿನ್ನೆಲೆ ನೀರು ಬಿಡುಗಡೆ ಮಾಡಲಾಗಿದೆ. ಚೆನ್ನೈನಲ್ಲಿ 24 ಗಂಟೆಗಳಲ್ಲಿ 134.29 ಮಿಮೀ ರಷ್ಟು ಅತೀ ಹೆಚ್ಚು ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರಿ ಮಳೆಗೆ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಧಾರಾಕಾರ ಮಳೆಗೆ ಚೆನ್ನೈ ಮಹಾನಗರ ಸ್ತಬ್ಧವಾಗಿದೆ. ಚೆನ್ನೈ ಏರ್ ಪೋರ್ಟ್ ರನ್ ವೇ ಕೂಡ ಬಂದ್ ಆಗಿದ್ದು, ಚೆನ್ನೈ ಲೋಕಲ್ ಟ್ರೈನ್ ಗಳು ಸ್ತಬ್ಧಗೊಂಡಿವೆ. ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಂದ ಮಾಹಿತಿ ಪಡೆದಿದ್ದು, ರಕ್ಷಣಾ ಮತ್ತು ಪರಿಹಾರ ಕುರಿತಂತೆ ಕೇಂದ್ರದಿಂದ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.