ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲ್ಯುಆರ್​ಸಿ ಆದೇಶ…

60
firstsuddi

ನವದೆಹಲಿ: ತಮಿಳುನಾಡಿಗೆ ಮುಂದಿನ 18 ದಿನಗಳ ಕಾಲ ಪ್ರತಿ ದಿನ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್​ಸಿ)ಯು ಕರ್ನಾಟಕಕ್ಕೆ ಸೂಚನೆ ನೀಡಿದೆ.

ವೀಡಿಯೋ ಕಾನ್ಫರೆನ್ಸ್ ಮೂಲಕ ಸಿಡಬ್ಲ್ಯುಆರ್​ಸಿ ಸಭೆ ನಡೆಸಿ ಅಕ್ಟೋಬರ್ 15ರವರೆಗೆ 3 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿನ ಬಿಳಿಗುಂಡ್ಲುಗೆ ಹರಿಸುವಂತೆ ಆದೇಶಿಸಿದೆ.

ಕರ್ನಾಟಕದ ವಾದ ಏನಿತ್ತು?
ಕಾವೇರಿ ಕೊಳ್ಳದಲ್ಲಿ ಶೇ.53 ಮಳೆ ಕೊರತೆ ಇದೆ. ಕರ್ನಾಟಕ 161 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. 34 ತಾಲೂಕುಗಳು ಭಾಗಶಃ ಬರಕ್ಕೆ ತುತ್ತಾಗಿವೆ. ಈ ಪರಿಸ್ಥಿತಿಯಲ್ಲಿ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ. ಜಲಾಶಯಗಳಲ್ಲಿ ನೀರಿಲ್ಲ, ನೀರು ಬಿಡಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ವಾದ ಮಂಡಿಸಿದ್ದರು.

ತಮಿಳುನಾಡು ವಾದ ಏನಿತ್ತು?
ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ತಮಿಳುನಾಡು ಪ್ರತಿದಿನ 12,500 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶ ನೀಡಬೇಕು ಎಂದು ವಾದ ಮಂಡಿಸಿತ್ತು. ಜೂನ್​ನಿಂದ ಸೆಪ್ಟೆಂಬರ್​​ವರೆಗೂ 123 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಹರಿಸಬೇಕಿತ್ತು. ಆದರೆ ಕರ್ನಾಟಕ ಈವರೆಗೂ ಕೇವಲ 40 ಟಿಎಂಸಿ ನೀರು ಹರಿಸಿದೆ. ಬಾಕಿ ಉಳಿದ 83 ಟಿಎಂಸಿ ನೀರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಪ್ರತಿಪಾದಿಸಿತ್ತು.

ಇದನ್ನು ಆಲಿಸಿದ ನಂತರ, 3000 ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಲಾಗಿದೆ. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರ ತನಕ ನೀರು ಹರಿಸುವಂತೆ ಆದೇಶಿಸಲಾಗಿದೆ.

ಮುಂದಿನ 15 ದಿನಗಳ ಕಾಲ ಪ್ರತಿದಿನ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಹರಿಸಬೇಕೆಂದು ಕಾವೇರಿ ನಿಯಂತ್ರಣ ಆಯೋಗ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶಗಳನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 21ರಂದು ಎತ್ತಿಹಿಡಿದಿತ್ತು. ಇದು ಕರ್ನಾಟಕವನ್ನು ಸಂಕಷ್ಟಕ್ಕೀಡುಮಾಡಿತ್ತು. ಇದಾದ ನಂತರ ಕಾವೇರಿ ಜಲಾನಯನ ಪ್ರದೇಶಗಳು ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆಗಳು ತೀವ್ರಗೊಂಡಿದ್ದವು.