ಚೆನ್ನೈ : ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಮಿಳುನಾಡು ಸರ್ಕಾರ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದೆ. ಈ ಸಂಬಂಧ ಇಂದು ಆದೇಶ ಹೊರಡಿಸಿರುವ ಸರ್ಕಾರ ಮಾಸ್ಕ್ ಕಡ್ಡಾಯ ನಿಯಮ ಉಲ್ಲಂಘಿಸಿದರೆ 500 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದೆ.
ದೇಶದಲ್ಲಿ, ವಿಶೇಷವಾಗಿ ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮಾಸ್ಕ್ ಧರಿಸದೇ ಓಡಾಡುವವರಿಗೆ 500 ರೂ. ದಂಡ ವಿಧಿಸಲು ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ರಾಜ್ಯಾದ್ಯಂತ ಈ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಆದೇಶಿಸಲಾಗಿದೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜೆ ರಾಧಾಕೃಷ್ಣನ್ ಅವರು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಕಳೆದೆರಡು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ತಮಿಳುನಾಡಿನಲ್ಲಿ ನಿನ್ನೆ 39 ಹೊಸ ಸೋಂಕುಗಳು ಪತ್ತೆಯಾಗಿವೆ.










