ವಿರುಧ್ ನಗರ್ : ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟಗೊಂಡಿರುವ ಘಟನೆ ವಿರುಧ್ ನಗರ ಜಿಲ್ಲೆಯ ಅಚಂಕುಲಂ ಗ್ರಾಮದಲ್ಲಿ ನಡೆದಿದೆ. ದುರಂತದಲ್ಲಿ ಗರ್ಭಿಣಿ ಹಾಗೂ ಕಾಲೇಜು ವಿದ್ಯಾರ್ಥಿ ಸೇರಿದಂತೆ 19 ಮಂದಿ ಮೃತಪಟ್ಟಿದ್ದು, 30ಕ್ಕೂ ಅಧಿಕ ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಸ್ಫೋಟದಿಂದ 9 ಮಂದಿ ಸಜೀವ ದಹನವಾಗಿದ್ದರೆ, ಇನ್ನೂ 9 ಮಂದಿ ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಫ್ಯಾಕ್ಟರಿಯ ಸುಮಾರು 15 ಕೊಠಡಿಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಇನ್ನೂ 13 ಕೊಠಡಿಗಳು ಭಾಗಶಃ ಹಾನಿಗೊಳಗಾಗಿವೆ.
ಪಟಾಕಿ ಕಾರ್ಖಾನೆ ಸ್ಫೋಟ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ಪಿಎಂ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಹಾಗೂ ತಮಿಳು ನಾಡಿನ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಮೃತರ ಕುಟುಂಬಕ್ಕೆ 3 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 1 ಲಕ್ಷ ರೂ. ಪರಿಹಾರವನ್ನು ನೀಡುವುದಾಗಿ ತಿಳಿಸಿದ್ದಾರೆ.










