ತಾಕತ್ತಿದ್ದರೆ RSS ಹಾಗೂ ಭಜರಂಗದಳ ಸಂಘಟನೆಯನ್ನು ನಿಷೇಧಿಸಲಿ : ಕಲ್ಲಡ್ಕ ಪ್ರಭಾಕರ್ ಸವಾಲು…

204
firstsuddi

ಚಿತ್ರದುರ್ಗ : ಆರ್‍ಎಸ್‍ಎಸ್ ಹಾಗೂ ಭಜರಂಗದಳ ಸಂಘಟನೆಯನ್ನು ತಾಕತ್ತಿದ್ದರೆ ನಿಷೇಧ ಮಾಡಲಿ ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸವಾಲೊಡ್ಡಿದ್ದಾರೆ. ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿದ ಬಳಿಕ ಆರ್‍ಎಸ್‍ಎಸ್ ಹಾಗೂ ಭಜರಂಗದಳ ನಿಷೇಧಿಸಬೇಕು ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಆರ್‍ಎಸ್‍ಎಸ್ ಹಾಗೂ ಭಜರಂಗದಳವನ್ನು ನಿಷೇಧಿಸಲು ಬಹಳ ಪ್ರಯತ್ನಗಳು ನಡೆಯುತ್ತಿವೆ. ಗಾಂಧೀಜಿ ಅವರ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಆರ್‍ಎಸ್‍ಎಸ್ ನಿಷೇಧ ಮಾಡಿದರು. ಆದರೆ ಜನರ ಬೆಂಬಲದಿಂದ ಆರ್‍ಎಸ್‍ಎಸ್ ಮತ್ತೆ ವಾಪಸ್ಸು ಬಂದು ದೇಶದಲ್ಲಿನ ಹಿಂದೂಗಳ ಅಭಿವೃದ್ದಿಗಾಗಿ ಶ್ರಮಿಸುತ್ತಾ ಬಂದಿದೆ. ಆರ್‍ಎಸ್‍ಎಸ್ ಎಂದಿಗೂ ಹಿಂಸೆ ಮೇಲೆ ನಂಬಿಕೆ ಇಟ್ಟು ಬಂದಿಲ್ಲ. ಇದರ ಬಗ್ಗೆ ಗೊತ್ತಿಲ್ಲದಿದ್ದರೆ ಚರಿತ್ರೆಯನ್ನು ಓದಿ ತಿಳಿದುಕೊಳ್ಳಬೇಕು. ಶಿಸ್ತು, ದೇಶಭಕ್ತಿ ಬೆಳೆಸುವ ಆರ್‍ಎಸ್‍ಎಸ್ ಹಾಗೂ ಭಜರಂಗದಳವನ್ನು ತಾಕತ್ತಿದ್ದರೆ ಬ್ಯಾನ್ ಮಾಡಲಿ ಎಂದರು.
ಕ್ರೈಸ್ತರು ಹಾಗೂ ಮುಸಲ್ಮಾನರು ಪಾಶ್ಚಾತ್ಯ ದೃಷ್ಠಿಕೋನ ಹೊಂದಿದ್ದಾರೆ. ಹೀಗಾಗಿ ನಕ್ಸಲರಿಂದ ನಮ್ಮ ಮೇಲೆ ದಾಳಿ ಮಾಡಿಸಲಾಗುತ್ತಿದೆ. ಅಲ್ಲದೇ ಹಿಂದೂ ಹೆಣ್ಣು ಮಕ್ಕಳನ್ನು ಹಾರಿಸಿಕೊಂಡು ಹೋಗಲಾಗುತ್ತಿದೆ. ಗೋವುಗಳ ಮಾರಣಹೋಮ ಮಾಡಲಾಗುತ್ತಿದೆ. ಇದನ್ನು ತಡೆಯುವುದಕ್ಕೆ, ಹಿಂದೂ ಸಮಾಜ ರಕ್ಷಣೆಗೆ ಆರ್‍ಎಸ್‍ಎಸ್ ಹೋರಾಡುತ್ತಿದೆ. ಮಾಡುತ್ತಿದೆ. ಗಾಂಧೀಜಿ ಹೇಳಿದ ಮತಾಂತರ, ಗೋಹತ್ಯೆ ನಿಷೇಧದ ಪರ ನಾವು ಹೋರಾಡುತ್ತಿದ್ದೇವೆ. ಆದರೆ ಈಗಿನವರು ನಕಲಿ ಗಾಂಧಿಗಳು, ಡೋಂಗಿಗಳು ಎಂದು ವ್ಯಂಗ್ಯವಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಲ್ನಲ್ಲಿ ಗೋಮಾಂಸ ತಿನ್ನುವುದಾಗಿ ಹೇಳಿದ್ದರು. ಗಾಂಧೀಜಿ ಹೇಳಿದ ಮಾತನ್ನು ಕಾಂಗ್ರೆಸ್ನವರು ಸೇರಿದಂತೆ ಯಾರೂ ಸಹ ಪಾಲನೆ ಮಾಡುತ್ತಿಲ್ಲ ಎನ್ನುವುದು ಇದರಿಂದಲೇ ತಿಳಿಯುತ್ತದೆ. ಆದರೆ ಗಾಂಧೀಜಿ ಅವರ ಮಾತನ್ನು ಕೇವಲ ಆರ್‍ಎಸ್‍ಎಸ್ ಮಾತ್ರ ಪಾಲಿಸುತ್ತಿದೆ ಎಂದರು.