ತಿರುವನಂತಪುರಂ : ಮೊದಲ ಮಂಗಳಮುಖಿ ಪತ್ರಕರ್ತೆ ತಮ್ಮ ಬಾಲ್ಯದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪತ್ರಕರ್ತೆ ಹೈಡಿ ಸಾದಿಯಾ ಹಾಗೂ ಅಥರ್ವ್ ಮೋಹನ್ ಅವರ ಸಮಾರಂಭವನ್ನು ಎರ್ನಾಕುಲಂ ಕಾರಯೋಗಂ ಮತ್ತು ಶ್ರೀ ಸತ್ಯಸಾಯಿ ಅನಾಥಾಶ್ರಮ ಟ್ರಸ್ಟ್ ವತಿಯಿಂದ ನಡೆಸಿಕೊಡಲಾಯಿತು. ಹೈಡಿ ಸಾದಿಯಾ ಅವರು ಮಂಗಳಮುಖಿ ಮೇಕಪ್ ಕಲಾವಿದೆ ರೆಂಜು ರೆಂಜಿ ಅವರ ದತ್ತು ಪುತ್ರಿಯಾಗಿದ್ದು, ಅಥರ್ವ್ ಮೋಹನ್ ಕೂಡಾ ಮಂಗಳಮುಖಿ ಸೂರ್ಯ ಮತ್ತು ಇಶಾನ್ ದಂಪತಿಯ ದತ್ತು ಪುತ್ರರಾಗಿದ್ದಾರೆ. ಅಲ್ಲದೇ ಇಬ್ಬರೂ ಬಾಲ್ಯದಿಂದಲೂ ಸ್ನೇಹಿತರಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಇದೀಗಾ ಇಬ್ಬರೂ ಸಾಂಪ್ರದಾಯಿಕವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಥರ್ವ್ ಮೋಹನ್ ಅವರು ತಿರುವನಂತಪುರಂನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಾದಿಯಾ ಅವರು ಖಾಸಗಿ ಚಾನೆಲ್ ಒಂದರಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.










