ದತ್ತಪೀಠದಲ್ಲಿ ಮಾಂಸಾಹಾರ ಸೇವನೆ ಅಕ್ಷಮ್ಯ ಅಪರಾಧ : ಸಿ.ಟಿ. ರವಿ ಆಕ್ರೋಶ…

88
firstsuddi

ಕಲಬುರಗಿ : ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿರುವ ದತ್ತಪೀಠದಲ್ಲಿ ಹೋಮ-ಹವನ ನಡೆಯುವ ಪವಿತ್ರ ಜಾಗದಲ್ಲಿ ಮಾಂಸಾಹಾರ ಅಡುಗೆ ಮಾಡಿ, ಸೇವನೆ ಮಾಡಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಚಾರವಾಗಿ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ಮಾಂಸಾಹಾರ ಮಾಡಿರೋದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ಹೊರಹಾಕಿದ್ದಾರೆ.

ದತ್ತಪೀಠ ಆವರಣದಲ್ಲಿ ಮಾಂಸಾಹಾರ ಅಡುಗೆ ಮಾಡಿ, ಸೇವನೆ ಮಾಡಿರುವ ವಿಚಾರ ನಿನ್ನೆ ರಾತ್ರಿ ನನ್ನ ಗಮನಕ್ಕೆ ಬಂದಿದೆ. ಅಲ್ಲಿನ ಜಿಲ್ಲಾಧಿಕಾರಿಗಳಿಗೆ ವಿಡಿಯೋ ಕಳುಹಿಸಿ ಮಾಹಿತಿ ಕೇಳಿದ್ದೇನೆ. ಅಲ್ಲಿನ ಜವಾಬ್ದಾರಿ ಯಾರಿಗೆ ನೀಡಲಾಗಿತ್ತೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾರ ಕುಮ್ಮಕ್ಕು ಇದ್ದರೂ ಕೂಡ ಅಲ್ಲಿ ಆ ರೀತಿ ಆಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಜವಾಬ್ದಾರಿ ಆಗಿತ್ತು. ಇದನ್ನು ನಿಯಂತ್ರಿಸುವ ಜವಾಬ್ದಾರಿ ಹೊತ್ತವರು ಈ ಕುರಿತು ಉತ್ತರಿಸಬೇಕು ಎಂದರು.

ಪೀಠದಿಂದ 300 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ, ಪ್ರಾಣಿ ಬಲಿಗೆ ನಿಷೇಧವಿದೆ. ಆದರೂ ಕೂಡ ಹೇಗೆ ಅಲ್ಲಿ ಪ್ರಾಣಿಬಲಿ, ಮಾಂಸಾಹಾರ ಮಾಡಿದ್ದಾರೆ ಅನ್ನೋ ಬಗ್ಗೆ ತನಿಖೆಯಾಗಬೇಕು. ಮುಂದೆ ಈ ರೀತಿ ನಡೆಯದಂತೆ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಮಸೀದಿಯಲ್ಲಿ ಸರ್ವೇ ಕಾರ್ಯ ನಡೆದಿದೆ. ವರದಿ ಸಲ್ಲಿಕೆಯ ನಂತರ ಸತ್ಯಾಂಶ ಹೊರ ಬರಲಿದೆ. ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯೋ ಅಗತ್ಯ ಇಲ್ಲ. ಮೊಘಲರು ಇತರೆ ಮುಸ್ಲಿಂ ದೊರೆಗಳ ಕಾಲದಲ್ಲಿ ಸಾವಿರಾರು ಗುಡಿಗಳನ್ನು ನಾಶ ಮಾಡಿಯೇ ಮಸೀದಿ ಕಟ್ಟಿದ್ದು ಜಾಗತಿಕ ಸತ್ಯವಾಗಿದೆ. ಇದಕ್ಕೆ ಕನ್ನಡಿ ಹಿಡಿಯುವ ಕೆಲಸ ನ್ಯಾಯಾಲಯ ಮಾಡುತ್ತಿದೆ. ಸರ್ವೇಕ್ಷಣಾ ವರದಿ ನಂತರ ಸರ್ಕಾರ ಸೂಕ್ತ ಕ್ರಮಕೈಗೊಳ್ಳುತ್ತದೆ ಎಂದರು.

 ಶ್ರೀರಂಗಪಟ್ಟಣದಲ್ಲಿ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದ ಹೆಸರಿನಲ್ಲೇ ದಾಖಲೆ ಇರೋದು. ಟಿಪ್ಪು ಕಾಲದಲ್ಲಿ ದೇವಸ್ಥಾನದ ಮೇಲೆಯೇ ಅರ್ಧ ಮಸೀದಿ ಕಟ್ಟಲಾಗಿದೆ. ಈ ಕುರಿತು ಸರ್ವೇಕ್ಷಣೆ ನಡೆಸಿದ್ರೆ ಸತ್ಯ ಹೊರಗೆ ಬರುತ್ತದೆ. ಟಿಪ್ಪು ಸುಲ್ತಾನ್​ನನ್ನು​ ಕೆಲವರು ಕನ್ನಡ ಪ್ರೇಮಿ ಅಂತಾರಲ್ಲ, ಕನ್ನಡವನ್ನು ಆಡಳಿತ ಭಾಷೆಯಿಂದ ತೆಗೆದು ಪರ್ಷಿಯನ್ ಭಾಷೆ ಹೇರಿದ್ದು ಟಿಪ್ಪು ಕಾಲದಲ್ಲೇ. ಕೆಲವರು ತಪ್ಪು ಮಾಹಿತಿಯಿಂದ ಟಿಪ್ಪು ಕನ್ನಡ ಪ್ರೇಮಿ ಅಂತಾರೆ. ಇನ್ನು ಕೆಲವರು ದುರುದ್ದೇಶದಿಂದ ಟಿಪ್ಪುವನ್ನು ಕನ್ನಡ ಪ್ರೇಮಿ ಅಂತಾರೆ ಎಂದು ಆರೋಪಿಸಿದರು.

ಮಡಿಕೇರಿಯ ಶಾಲೆಯಲ್ಲಿ ಮಕ್ಕಳಿಗೆ ಶಸ್ತ್ರಾಸ್ತ್ರ ತರಬೇತಿ ವಿಚಾರದ ಕುರಿತು ಮಾತನಾಡಿದ ಅವರು, ಮಡಿಕೇರಿಯ ಶಾಲೆಯಲ್ಲಿ ಭಜರಂಗದಳದ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ. ಇಲ್ಲಿ ಮಕ್ಕಳಿಗೆ ಅಥವಾ ವಿದ್ಯಾರ್ಥಿಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿಲ್ಲ. ಆತ್ಮರಕ್ಷಣೆಗಾಗಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ. ಪೊಲೀಸರಿಗೆ ಯಾವ ರೀತಿ ತರಬೇತಿ ನೀಡಲಾಗುತ್ತದೆಯೋ ಹಾಗೆ ತರಬೇತಿ ನೀಡಲಾಗಿದೆ ಎಂದರು.

ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಕಾಂಗ್ರೆಸ್ ನಿಯಮದ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಕಾಂಗ್ರೆಸ್​ಗೆ ನಿಯಮ ಮಾಡೋದು ಗೊತ್ತು, ಅದನ್ನು ಬೈಪಾಸ್ ಮಾಡೋದು ಗೊತ್ತು. ಐದು ವರ್ಷ ಕಾರ್ಯಕರ್ತನಾಗಿ ದುಡಿದಿದ್ರೆ ಟಿಕೆಟ್ ನೀಡಬಹುದು ಎನ್ನುವ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಪ್ರಾಮಾಣಿಕತೆ, ದೇಶಭಕ್ತಿ ನಿರೀಕ್ಷೆ ಮಾಡಬೇಡಿ. ವಂಶವಾಹಿನಿ ಹೊರತಾದ ರಾಜಕಾರಣ. ಮತೀಯ ಓಲೈಕೆ ಇಲ್ಲದ ರಾಜಕಾರಣ, ಭ್ರಷ್ಟಾಚಾರ ರಹಿತ ಆಡಳಿತ ಕಾಂಗ್ರೆಸ್​ನಿಂದ ನಿರೀಕ್ಷೆ ಮಾಡಿದ್ರೆ ಭ್ರಮನಿರಸನವಾಗುತ್ತದೆ ಎಂದರು‌.