ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರಗೈದು ಕೊಲೆ – ಆರೋಪಿಗಳ ಪೈಕಿ ಇಬ್ಬರು ಪೊಲೀಸರು!

64
firstsuddi

ಜೈಪುರ್: ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಿದ ಘಟನೆ ರಾಜಸ್ಥಾನದ ಬಿಕಾನೆರ್ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಸಂಬಂಧ ಐವರ ಮೇಲೆ ಪ್ರಕರಣ ದಾಖಲಾಗಿದೆ. ಇದರಲ್ಲಿ ಇಬ್ಬರು ಪೊಲೀಸ್ ಪೇದೆಗಳು ಎನ್ನುವುದು ಆಶ್ಚರ್ಯಕರ ಸಂಗತಿಯಾಗಿದೆ.

ದಲಿತ ಯುವತಿ ಬಿಕಾನೆರ್‌ನಿಂದ ಖಜುವಾಲಾಗೆ ಕಂಪ್ಯೂಟರ್ ಕ್ಲಾಸ್‌ಗೆ ತೆರಳಿದ್ದಾಳೆ. ನಿನ್ನೆ ಬೆಳಗ್ಗೆ ತರಗತಿಗೆ ತೆರಳುತ್ತಿದ್ದ ವೇಳೆ ದಿನೇಶ್ ಅನ್ನೋ ಆರೋಪಿ ಮತ್ತಿಬ್ಬರೊಂದಿಗೆ ಯುವತಿಯ ಅಪಹರಿಸಿದ್ದಾನೆ. ಅಪಹರಣ ಮಾಡಲು ದಿನೇಶ್‌ಗೆ ಇಬ್ಬರು ಪೊಲೀಸ್ ಪೇದೆಗಳು ನೆರವು ನೀಡಿದ್ದಾರೆ. ಯುವತಿಯ ಅಪಹರಣ ಮಾಡಿದ ದಿನೇಶ್ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಯಾರು ಇಲ್ಲದ ಮನೆಯಲ್ಲಿ ಸಾಮೂಹಿತ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಅತ್ಯಾಚಾರದ ಬಳಿಕ ಪ್ರಕರಣ ಹೊರಬರದಂತೆ ನೋಡಿಕೊಳ್ಳಲು ಯುವತಿಯನ್ನು ಹತ್ಯೆ ಮಾಡಲಾಗಿದೆ. ಬಳಿಕ ಖಜುವಾಲಾ ಬಳಿಯ ಸಿನಿಮಾ ಮಂದಿರದ ಬಳಿ ಯುವತಿಯ ಮೃತದೇಹ ಎಸೆಯಲಾಗಿದೆ. ಈ ಕುರಿತು ಯುವತಿ ನಾಪತ್ತೆ ಎಂದು ತಂದೆ ದೂರು ದಾಖಲಿಸಿದ್ದಾರೆ. ಇತ್ತ ಪೊಲೀಸರು ಸಿಸಿಟಿವಿ ಸೇರಿದಂತೆ ಹಲವು ಕಡೆಗಳಲ್ಲಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸಿಕ್ಕ ಮಾಹಿತಿಗಳ ಅನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇತ್ತ ಯುವತಿಯ ಮೃತದೇಹವೂ ಪತ್ತೆಯಾಗಿದೆ. ತನಿಖೆ ತೀವ್ರಗೊಳಿಸಿದ ಪೊಲೀಸರಿಗೆ ಆರೋಪಿಗಳ ಮಾಹಿತಿ ಸಿಕ್ಕಿದೆ. ಈ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಪೇದೆಗಳಾದ ಭಾಗಿರತ್ ವಿಷ್ಣೋಯ್ ಹಾಗೂ ಮನೋಜ್ ವಿಷ್ಣೋಯ್ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇಬ್ಬರನ್ನು ಅಮಾನತು ಮಾಡಲಾಗಿದ್ದು, ಇದೀಗ ಪ್ರಮುಖ ಆರೋಪಿ ದಿನೇಶ್ ಹಾಗೂ ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.