ದಲಿತ ವರ್ಗಕ್ಕೆ ಮೀಸಲಾತಿಯನ್ನು ನೀಡುವ ಮೂಲಕ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಟ್ಟವರು ಛತ್ರಪತಿ ಸಾಹು ಮಹಾರಾಜ್ : ಕೆ.ಟಿ.ರಾಧಾಕೃಷ್ಣ.

104
firstsuddi

ಚಿಕ್ಕಮಗಳೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ದೇಶದಲ್ಲಿ ಮೊದಲ ಬಾರಿಗೆ ಮೀಸಲಾತಿಯನ್ನು ಜಾರಿಗೊಳಿಸಿದವರು ಕೊಲ್ಲಾಪುರ ಸಂಸ್ಥಾನದ ಛತ್ರಪತಿ ಸಾಹು ಮಹಾರಾಜ್ ಅವರು ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.

ನಗರದ ಬಿಎಸ್ಪಿ ಕಛೇರಿಯಲ್ಲಿ ನಿನ್ನೆ ಏರ್ಪಡಿಸಿದ್ದ ಛತ್ರಪತಿ ಸಾಹು ಮಹಾರಾಜ್ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಲಿತ ವರ್ಗಕ್ಕೆ ಅಂದಿನ ಕಾಲದಲ್ಲೇ ಮೀಸಲಾತಿಯನ್ನು ನೀಡುವ ಮೂಲಕ ಆ ಸಮುದಾಯದ ಜನಕ್ಕೆ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಟ್ಟವರು ಛತ್ರಪತಿ ಸಾಹು ಮಹಾರಾಜ್. ಅಸ್ಪøಶ್ಯತೆ, ಅಸಮಾನತೆಯಂತಹ ಸಾಮಾಜಿಕ ಪಿಡುಗುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅವರು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೊರದೇಶಗಳಿಗೆ ತೆರಳುವ ವೇಳೆ ಅವರಿಗೆ ಆರ್ಥಿಕ ನೆರವನ್ನೂ ಸಾಹು ಮಹಾರಾಜರು ನೀಡಿದ್ದರು ಎಂದು ತಿಳಿಸಿದರು.

ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ ಮೀಸಲಾತಿ ಜನಕ ಸಾಹು ಮಹಾರಾಜರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಮಹಿಳೆಯರಿಗಾಗಿ ಶಾಲೆಗಳನ್ನು ತೆರೆದ ಮಹಾತ್ಮರು ಎಂದು ಹೇಳಿದರು.

ಪಕ್ಷದ ಜಿಲ್ಲಾ ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಉಪನ್ಯಾಸಕ ಎ.ಪಿ.ಸುರೇಶ್ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ, ಕೆ.ಎಸ್.ಮಂಜುಳಾ, ಹೊನ್ನಪ್ಪ, ರವಿಕುಮಾರ್, ಧನಂಜಯ, ಗಿರೀಶ್, ನಗರ ಖಜಾಂಚಿ ನವೀನ್ ಉಪಸ್ಥಿತರಿದ್ದರು.