ಬೆಂಗಳೂರು : ದಿನೇಶ್ ಗುಂಡೂರಾವ್ ಒಬ್ಬ ಅಯೋಗ್ಯ, ಸಿದ್ದರಾಮಯ್ಯ ಅವರ ಚೇಲಾ, ಬಕೆಟ್ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ವಿರುದ್ಧ ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಅವರು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್ ಅವರ ಕಚೇರಿಯಲ್ಲಿ ಮಾತನಾಡಿದ ಅವರು, ದಿನೇಶ್ ಗುಂಡೂರಾವ್ ಒಬ್ಬ ಅಯೋಗ್ಯ, ಸಿದ್ದರಾಮಯ್ಯ ಅವರ ಚೇಲಾ, ಬಕೆಟ್. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷನಾಗಿ ಯೋಗ್ಯವಾಗಿ ಕೆಲಸ ಮಾಡಿದ್ದರೆ ನಾವೆಲ್ಲಾ ರಾಜೀನಾಮೆ ನೀಡುವ ಪರಿಸ್ಥಿತಿ ಬರುತ್ತಿರಲಿಲ್ಲ. ನಮ್ಮನ್ನೆಲಾ ದ್ರೋಹಿಗಳು ಎಂದು ಹೇಳಲು ಅವನ್ಯಾರು? ಅವನ ಅಪ್ಪನಿಂದಾಗಿ ಅಧ್ಯಕ್ಷನಾಗಿದ್ದಾನೆ ಬಿಟ್ಟರೆ ಆತನಿಗೆ ಬೇರೆ ಯಾವ ಅರ್ಹತೆ ಇದೆ? ಎಂದು ಪ್ರಶ್ನಿಸಿದರು. ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ. ಪರಮೇಶ್ವರ್ ಅವರನ್ನು ಈಗಾ ನಿರ್ಲಕ್ಷ ಮಾಡಲಾಗುತ್ತಿದೆ. ಸಿದ್ದರಾಮಯ್ಯ, ಕೃಷ್ಣಭೈರೇಗೌಡ, ದಿನೇಶ್ ಗುಂಡೂರಾವ್, ರಿಜ್ವಾನ್ ಹರ್ಷದ್ ಸೇರಿಕೊಂಡು ತೀರ್ಮಾನ ಮಾಡುತ್ತಾರೆ. ಇದು ಸಿದ್ದರಾಮಯ್ಯ ರವರ ಕಾಂಗ್ರೆಸ್ಸಾ? ಒರಿಜಿನಲ್ ಕಾಂಗ್ರೆಸ್ಸಾ?. ನಾವೇನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಆದರೂ ದಿನೇಶ್ ಗುಂಡೂರಾವ್ ನಮ್ಮ ಬಗ್ಗೆ ಯಾಕೆ ಆರೋಪ ಮಾಡುತ್ತಾನೆ? ಕೋಲಾರದಲ್ಲಿ ಕೆ.ಹೆಚ್. ಮುನಿಯಪ್ಪರನ್ನು ಸೋಲಿಸಿದರು. ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಿದರು. ಮಂಡ್ಯದಲ್ಲಿ ನಿಖಿಲ್‍ನನ್ನು ಸೋಲಿಸಿದರು. ಸೋಲಿಸಿದವರನ್ನು ಜೊತೆಯಲ್ಲಿಟ್ಟುಕೊಂಡು ಸಭೆ ನಡೆಸುತ್ತಾರೆ. ಹಿರಿಯ ನಾಯಕರನ್ನು ಕಡೆಗಣಿಸುತ್ತಾರೆ. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಬಾರದಿತ್ತು. ಅವರು ಕೆ.ಹೆಚ್. ಮುನಿಯಪ್ಪ ಅವರನ್ನು ಅವಮಾನಿಸಿದ್ದಾರೆ. ಇದರಿಂದ ಅವರು ತುಂಬಾ ನೋವು ಅನುಭವಿಸುತ್ತಿದ್ದಾರೆ. ದಿನೇಶ್ ಗುಂಡೂರಾವ್ ಅವರಿಗೆ ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.










