ಬೆಂಗಳೂರು : ರಾಜ್ಯದಲ್ಲಿ ಪ್ರವಾಹ ಉಂಟಾಗಿ ಒಂದು ತಿಂಗಳು ಕಳೆದರೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಬಿಡುಗಡೆ ಮಾಡಿಸುವಲ್ಲಿ ವಿಫಲವಾಗಿದ್ದು, ಈ ಕುರಿತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಟ್ವಿಟರ್ ಮೂಲಕ ಬಿಎಸ್‍ವೈ ಹಾಗೂ ಸಂಸದರ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದಲ್ಲಿರುವುದು ತುಘಲಕ್ ಸರ್ಕಾರ ಮಾತ್ರ ಅಂತ ಅಂದುಕೊಂಡಿದ್ದೆ. ಆದರೆ ಈ ಸರ್ಕಾರಕ್ಕೆ ಕಣ್ಣು ಕಿವಿ ಯಾವುದೂ ಇಲ್ಲ. ನೆರೆ ಬಂದು ಒಂದುವರೆ ತಿಂಗಳಾದರೂ ನಿರಾಶ್ರಿತರಿಗೆ ಸೂಕ್ತ ವಸತಿ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. ಮಾನ್ಯ ಬಿ.ಎಸ್. ಯಡಿಯೂರಪ್ಪ ಅವರೇ, ನಿಮಗೆ ಹಾಗೂ 25 ಬಿಜೆಪಿಯ ಸಂಸದರಿಗೆ ಪ್ರಧಾನಮಂತ್ರಿಗಳ ಜೊತೆ ರಾಜ್ಯದ ನೆರೆ ಪರಿಸ್ಥಿತಿಯ ಕುರಿತು ಗಟ್ಟಿಯಾಗಿ ಮಾತನಾಡುವ ಧೈರ್ಯ ಇಲ್ಲ ಎಂದಾದರೆ ನಾವೂ ನಿಮ್ಮ ಜೊತೆ ದೆಹಲಿಗೆ ಬರುತ್ತೇವೆ. ಸರ್ವ ಪಕ್ಷ ನಿಯೋಗದ ಜೊತೆ ಪ್ರಧಾನಿಗಳನ್ನು ಭೇಟಿ ಮಾಡೋಣ ಎಂದು ಟ್ವೀಟ್ ಮಾಡಿದ್ದಾರೆ.










