ಬೆಳಗಾವಿ : ಕೆರೆಗೆ ದೀಪಾವಳಿಯ ತ್ಯಾಜ್ಯ ಎಸೆಯಲು ತೆರಳಿದ್ದ ಸಹೋದರಿಯರು ನೀರುಪಾಲಾಗಿರುವ ಘಟನೆ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ನಡೆದಿದೆ.
ಸಾಂಬ್ರಾ ನಿವಾಸಿ ನೇತ್ರಾ ಕೊಳವಿ (8) ಹಾಗು ಪ್ರಿಯಾ ಕೊಳವಿ (6) ಮೃತ ಸಹೋದರಿಯರು. ದೀಪಾವಳಿ ಪೂಜೆಯಲ್ಲಿ ಬಳಸಿದ ಪೂಜಾ ಸಾಮಗ್ರಿಗಳನ್ನು ಕೆರೆಗೆ ವಿಸರ್ಜಿಸಲು ಹಿರಿಯ ಸಹೋದರಿ ಸಂಧ್ಯಾ(10) ಜತೆಗೆ ಈ ಇಬ್ಬರು ತೆರಳಿದ್ದರು. ಬಾಳೆ ಗಿಡ ಕೆರೆಗೆ ಎಸೆಯುವ ವೇಳೆ ಸಂಧ್ಯಾ, ನೇತ್ರಾ, ಹಾಗು ಪ್ರಿಯಾ ಮೂವರು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ.
ಇದನ್ನು ಗಮನಿಸಿದ ಸ್ಥಳೀಯರು ಸಂಧ್ಯಾಳನ್ನು ರಕ್ಷಿಸಿದ್ದು, ಇನ್ನುಳಿದ ಇಬ್ಬರು ಬಾಲಕಿಯರ ಮೃತದೇಹವನ್ನು ಹೊರ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










