ನವದೆಹಲಿ: ದೆಹಲಿ ವಿಧಾನಸಭೆಗೆ ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತಾ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 32 ವರ್ಷಗಳ ವಿಧಾನಸಭಾ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗುತ್ತಿರುವ ನಾಲ್ಕನೇ ಮಹಿಳೆ ಅವರು. ಬಿಜೆಪಿಯ ಸುಷ್ಮಾ ಸ್ವರಾಜ್, ಕಾಂಗ್ರೆಸ್‍ನ ಶೀಲಾ ದೀಕ್ಷಿತ್ ಹಾಗೂ ಎಎಪಿಯ ಆತಿಶಿ ಅವರು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದರು.
ಇಂದು ಮಧ್ಯಾಹ್ನದ ಸುಮಾರಿಗೆ ರಾಮಲೀಲಾ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ರೇಖಾ ಅವರು ದೆಹಲಿಯ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರೊಂದಿಗೆ ಆರು ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಚುನಾವಣೆಯಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ, ಬಿಜೆಪಿ ಶಾಸಕರಾದ ಆಶಿಶ್ ಸೂದ್, ಮಂಜಿಂದರ್ ಸಿಂಗ್ ಸಿರ್ಸಾ, ರವೀಂದರ್ ಇಂದ್ರಜ್, ಕಪಿಲ್ ಮಿಶ್ರಾ ಮತ್ತು ಪಂಕಜ್ ಕುಮಾರ್ ಸಿಂಗ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆಂದು ತಿಳಿದುಬಂದಿದೆ.
ಮೊದಲ ಬಾರಿ 2007 ರಲ್ಲಿ ಉತ್ತರ ಪಿತಂಪುರದಿಂದ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದ ರೇಖಾ, 3 ಬಾರಿ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಬನಿಯಾ ಸಮುದಾಯಕ್ಕೆ ಸೇರಿದ ರೇಖಾ ಗುಪ್ತಾ ದೆಹಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಊಹೆಗೂ ನಿಲುಕದ ರೀತಿಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನ ಆಯ್ಕೆ ಮಾಡಿದೆ. 27 ವರ್ಷಗಳ ಸತತ ಯತ್ನಗಳ ಬಳಿಕ ದೆಹಲಿಯಲ್ಲಿ ಗದ್ದು ಏರಿರುವ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ನಾರಿಶಕ್ತಿಯ ಕೈಗೆ ಆಡಳಿತ ಚುಕ್ಕಾಣಿ ನೀಡಿದೆ.
ಈ ನಡುವೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ರೇಖಾ ಗುಪ್ತಾ ಅವರು, ಇದು ಒಂದು ಪವಾಡ ಎನಿಸುತ್ತಿದೆ, ಇದು ಹೊಸ ಪ್ರೇರಣೆ ಮತ್ತು ಹೊಸ ಅಧ್ಯಾಯ. ನಾನು ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ ಎಂದರೆ ಎಲ್ಲಾ ಮಹಿಳೆಯರಿಗೂ ಈ ದಾರಿ ತೆರೆದಿರುತ್ತದೆ ಎಂದೇ ಅರ್ಥ. ಭ್ರಷ್ಟಾಚಾರ ನಡೆಸಿದ ಪ್ರತಿಯೊಬ್ಬರೂ ಪ್ರತಿ ರೂಪಾಯಿಯ ಲೆಕ್ಕವನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಒಂದು ದೊಡ್ಡ ಜವಾಬ್ದಾರಿ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಹೈಕಮಾಂಡ್‍ಗೆ ಧನ್ಯವಾದ ಹೇಳುತ್ತೇನೆ. ನಾನು ನನ್ನ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇನೆ. ನಮ್ಮ ಪಕ್ಷವು ನೀಡಿರುವ ಎಲ್ಲಾ ಭರವಲೆಗಳನ್ನು ಪೂರ್ಣಗೊಳಿಸುವುದು ನನ್ನ ಮೊದಲ ಆದ್ಯತೆಯಾಗಿದೆ, ಎರಡನೇ ಆದ್ಯತೆಯೆಂದರೆ ನಮ್ಮ ಎಲ್ಲಾ 48 ಶಾಸಕರು ಒಂದು ತಂಡವಾಗಿ ಕೆಲಸ ಮಾಡುವುದು. ನಾನು ದೆಹಲಿಯ ಮುಖ್ಯಮಂತ್ರಿಯಾಗುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ.. ಹಿಂದಿನ ಭ್ರಷ್ಟ ಸರ್ಕಾರವು ಜನರಿಗೆ ಸೇರಿದ ಪ್ರತಿ ರೂಪಾಯಿಗೂ ಲೆಕ್ಕವನ್ನು ಇದೀಗ ನೀಡಬೇಕಾಗುತ್ತದೆ. ನಾನು ಪ್ರಧಾನಿ ನರೇಂದ್ರ ಮೋದಿಯವರ ನಿರೀಕ್ಷೆಗಳಿಗೆ ತಕ್ಕಂತೆ ನಡೆಯುತ್ತೇನೆಂದು ತಿಳಿಸಿದ್ದಾರೆ.










