ನವದೆಹಲಿ : ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ನಾಮನಿರ್ದೇಶಿತ ಸದಸ್ಯರಿಗೆ ಮತದಾನಕ್ಕೆ ಅವಕಾಶ ನೀಡುವ ವಿಚಾರವಾಗಿ ಬಿಜೆಪಿ ಮತ್ತು ಆಪ್ ತಿಕ್ಕಾಟದಿಂದ ಮೂರು ಬಾರಿ ಮೇಯರ್ ಚುನಾವಣೆ ಮುಂದೂಡಿಕೆಯಾಗಿತ್ತು. ಬಳಿಕ ಆಪ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸದಂತೆ ಸೂಚನೆ ನೀಡಿ ಕೂಡಲೇ ಚುನಾವಣೆ ನಡೆಸಬೇಕು ಎಂದು ಸೂಚನೆ ನೀಡಿತ್ತು.
ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಇಂದು ಮೇಯರ್ ಆಯ್ಕೆಗೆ ಚುನಾವಣೆ ನಡೆದಿತ್ತು. 266 ಮತಗಳಲ್ಲಿ ಬಿಜೆಪಿಯ ರೇಖಾ ಗುಪ್ತಾ 116 ಮತಗಳನ್ನು ಪಡೆದರೆ, ಶೆಲ್ಲಿ ಒಬೆರಾಯ್ 150 ಮತಗಳನ್ನು ಪಡೆಯುವ ಮೂಲಕ ಗೆಲವು ಸಾಧಿಸಿದರು.
ನಾನು ಈ ಸದನವನ್ನು ಸಾಂವಿಧಾನಿಕ ರೀತಿಯಲ್ಲಿ ನಡೆಸುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನೀವೆಲ್ಲರೂ ಸದನದ ಘನತೆಯನ್ನು ಕಾಪಾಡುತ್ತೀರಿ ಮತ್ತು ಅದರ ಸುಗಮ ಕಾರ್ಯನಿರ್ವಹಣೆಗೆ ಸಹಕರಿಸುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಶೆಲ್ಲಿ ಒಬೆರಾಯ್ ಹೇಳಿದ್ದಾರೆ.










