ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೆಚ್-1ಬಿ ವಿದೇಶಿ ಅತಿಥಿ ಕಾರ್ಮಿಕರ ವೀಸಾ ಕುರಿತು ದೇಶಕ್ಕೆ ಅತ್ಯಂತ ಸಮರ್ಥ ಮತ್ತು ಶ್ರೇಷ್ಠ ಜನರ ಅಗತ್ಯವಿದೆ, ಅದು ಈ ವೀಸಾ ಕಾರ್ಯಕ್ರಮದ ಮೂಲಕ ಸಾಧ್ಯ ಎಂದು ತಿಳಿಸಿದ್ದಾರೆ. ತಾವು ಕೂಡ ಹೆಚ್-1ಬಿ ವೀಸಾ ಕಾರ್ಯಕ್ರಮವನ್ನು ಬಳಸಿಕೊಂಡಿರುವುದಾಗಿ ಹೇಳಿದ್ದಾರೆ. ಹೆಚ್-1ಬಿ ವೀಸಾ ವಲಸೆರಹಿತ ವೀಸಾ ಆಗಿದ್ದು, ಇದು ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅಮೆರಿಕದ ಕಂಪನಿಗಳಿಗೆ ಅನುವು ಮಾಡಿಕೊಡುತ್ತದೆ. ತಂತ್ರಜ್ಞಾನ ಆಧಾರಿತ ಕಂಪನಿಗಳು ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತಾರು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಇದನ್ನು ಅವಲಂಬಿಸಿವೆ. ಈ ವಿಷಯದಲ್ಲಿ ಎರಡೂ ಕಡೆಯ ವಾದ ಕೇಳಲು ಇಚ್ಛಿಸುತ್ತೇನೆ. ಆದರೆ ನಮ್ಮ ದೇಶಕ್ಕೆ ಬರುವ ಅತ್ಯಂತ ಸಮರ್ಥ ಜನರು ನನಗೆ ಇಷ್ಟ, ಅವರು ಹೊಂದಿರುವ ಅರ್ಹತೆಗಳನ್ನು ಅರ್ಹತೆ ಹೊಂದಿರದ ಜನರಿಗೆ ತರಬೇತಿ ನೀಡಿ ಮತ್ತು ಸಹಾಯ ಮಾಡಬಹುದು. ಹೆಚ್-1ಬಿ ವೀಸಾ ನಿಲ್ಲಿಸಲು ನಾನು ಇಚ್ಛಿಸುವುದಿಲ್ಲ. ನಾನು ಎಂಜಿನಿಯರ್‍ಗಳ ಕುರಿತು ಮಾತ್ರ ಮಾತನಾಡುತ್ತಿಲ್ಲ, ಎಲ್ಲಾ ಹಂತದ ಜನರ ಕುರಿತು ಮಾತನಾಡುತ್ತಿದ್ದೇನೆ ಎಂದು ಡೊನಾಲ್ಡ್ ಟ್ರಂಪ್ ಶ್ವೇತಭವನದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾಧ್ಯಮಗಾರರಿಗೆ ತಿಳಿಸಿದರು.










