ದೇಶದ ಎಲ್ಲ ಸಮುದಾಯಕ್ಕೆ ಅನ್ವಯಿಸುವ ಜನಸಂಖ್ಯಾ ನೀತಿ ಬೇಕು : ಮೋಹನ್ ಭಾಗವತ್.

65
firstsuddi

ನಾಗಪುರ : ದೇಶದ ಎಲ್ಲ ಸಮುದಾಯಗಳಿಗೂ ಸಮಾನವಾಗಿ ಅನ್ವಯವಾಗುವ ಜನಸಂಖ್ಯಾ ನಿಯಂತ್ರಣ ನೀತಿ ಅಗತ್ಯವಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.

ನಾಗಪುರದ ರೇಷಂಭಾಗ್ ನಲ್ಲಿ ನಡೆದ ವಿಜಯದಶಮಿ ಉತ್ಸವದಲ್ಲಿ ಮಾತನಾಡಿದ ಅವರು, ಜನಸಂಖ್ಯಾ ನಿಯಂತ್ರಣ ಪ್ರಮುಖ ವಿಷಯವಾಗಿದೆ. ಆದ್ದರಿಂದ ಸಮಗ್ರ ಜನಸಂಖ್ಯಾ ನೀತಿಯನ್ನು ತರಬೇಕು. ಅದು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು. ಆಗ ಮಾತ್ರ ಜನಸಂಖ್ಯೆ ನಿಯಂತ್ರಣದ ಕ್ರಮಗಳು ಫಲ ನೀಡಲು ಸಾಧ್ಯ ಎಂದರು.

ಜನರಿಗೆ ಸೌಲಭ್ಯ ಒದಗಿಸಲು ಸಂಪನ್ಮೂಲಗಳು ಬೇಕು. ಸಂಪನ್ಮೂಲಗಳನ್ನು ಬೆಳೆಸದೇ ಜನಸಂಖ್ಯೆ ಹೆಚ್ಚಾದರೆ ಅದು ಹೊರೆಯಾಗುತ್ತದೆ. ಜನಸಂಖ್ಯೆಯನ್ನೇ ದೇಶದ ಸಂಪನ್ಮೂಲ ಎಂದು ಪರಿಗಣಿಸುವ ದೃಷ್ಟಿಯೂ ಇದೆ. ನಾವು ಈ ಎರಡೂ ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಜನಸಂಖ್ಯಾ ನೀತಿಯನ್ನು ರೂಪಿಸಬೇಕಿದೆ ಎಂದು ಸಲಹೆ ನೀಡಿದರು.

ಕೆಲವರು ನಮ್ಮಿಂದ ಅಲ್ಪಸಂಖ್ಯಾತರಿಗೆ ಅಪಾಯವಿದೆ ಎಂದು ಹೆದರಿಸುತ್ತಿದ್ದಾರೆ, ಇದು ಸಂಘದ ಅಥವಾ ಹಿಂದೂಗಳ ಸ್ವಭಾವವಲ್ಲ, ಸಹೋದರತ್ವ, ಸೌಹಾರ್ದತೆ ಮತ್ತು ಶಾಂತಿಯ ಪರವಾಗಿ ನಿಲ್ಲವುದು ಸಂಘದ ಸಂಕಲ್ಪ. ದೇವಸ್ಥಾನ, ನೀರು, ಸ್ಮಶಾನ ಎಲ್ಲರಿಗೂ ಸಮಾನವಾಗಿರಬೇಕು, ಸಣ್ಣಪುಟ್ಟ ವಿಚಾರಗಳ ಬಗ್ಗೆ ನಾವು ಜಗಳವಾಡಬಾರದು. ಯಾರೋ ಒಬ್ಬರು ಕುದುರೆ ಸವಾರಿ ಮಾಡಬಹುದು, ಮತ್ತೊಬ್ಬರಿಗೆ ಈ ಅವಕಾಶ ಇಲ್ಲ ಎನ್ನುವ ಮಾತು ಕೇಳಿಬರದಂಥ ಸಮಾಜ ರೂಪಿಸಲು ನಾವು ಶ್ರಮಿಸಬೇಕು. ಇಂದು ಹಿಂದೂರಾಷ್ಟ್ರದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ವಿಚಾರವನ್ನು ಹಲವರು ಒಪ್ಪುತ್ತಾರೆ ಆದರೆ ಹಿಂದೂ ಎನ್ನುವ ಪದದ ಬಗ್ಗೆ ಅವರಿಗೆ ಆಕ್ಷೇಪವಿದೆ. ಇತರ ಪದಗಳನ್ನು ಬಳಸಬೇಕು ಎಂದು ಒತ್ತಾಯಿಸುತ್ತಾರೆ. ನಮಗೂ ಈ ವಿಚಾರದಲ್ಲಿ ಯಾವುದೇ ಆಕ್ಷೇಪವಿಲ್ಲ. ಆದರೆ ಪರಿಕಲ್ಪನೆಯ ಸ್ಪಷ್ಟತೆಗಾಗಿ ನಾವು ಹಿಂದೂ ಎನ್ನುವ ಪದಕ್ಕೆ ಒತ್ತು ಕೊಡುತ್ತೇವೆ ಎಂದರು.

ಸಮಾಜದಲ್ಲಿ ಕಂಡುಬರುವ ತಪ್ಪುಗಳ ಬಗ್ಗೆ ಜನರು ಕಾನೂನು ಚೌಕಟ್ಟಿನಲ್ಲಿ ಧ್ವನಿ ಎತ್ತಬೇಕಿದೆ. ತಪ್ಪುಗಳ ವಿರುದ್ಧ ಧ್ವನಿ ಎತ್ತುವರು ಸಮಾಜದಲ್ಲಿ ಸಾಮಾನ್ಯ ವಿದ್ಯಮಾನವಾಗಬೇಕು. ನಾವು ಒಂದಾಗಿ ಬದುಕಬೇಕಿದೆ. ಆತ್ಮನಿರ್ಭರ್ ಆಗಬೇಕು ಎನ್ನುವುದು ಸರಿ. ಆದರೆ ನಮ್ಮ ಆತ್ಮ ಯಾವುದು ಎಂಬ ಬಗ್ಗೆ ನಮಗೆ ಸ್ಪಷ್ಟತೆ ಬೇಕಿದೆ ಎಂದು ಹೇಳಿದರು.

ಮಹಿಳೆಯರಿಗೆ ಎಲ್ಲ ಸ್ಥಳಗಳಲ್ಲಿ ಸಮಾನ ಹಕ್ಕು ಸಿಗಬೇಕು. ನಾಲ್ಕು ಗೋಡೆಗಳ ಮಧ್ಯೆ ಅವರನ್ನು ನಿರ್ಬಂಧಿಸುವುದು ಸರಿಯಲ್ಲ. ಮಾತೃಶಕ್ತಿ ಮಾಡಬಹುದಾದ ಎಲ್ಲಾ ಕೆಲಸಗಳನ್ನು ಪುರುಷ ಮಾಡಲು ಸಾಧ್ಯವಿಲ್ಲ ಎಂದರು.