ದೇಶದ ಮೊದಲ ಮತದಾರ ಶ್ಯಾಮ್ ಸರನ್ ನೇಗಿ ನಿಧನ…

66
firstsuddi

ಶಿಮ್ಲಾ : ದೇಶದ ಮೊದಲ ಮತದಾರ ಮಾಸ್ಟರ್ ಶ್ಯಾಮ್ ಸರನ್ ನೇಗಿ ಇಂದು ವಿಧಿವಶರಾಗಿದ್ದಾರೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಕಲ್ಪಾದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ನೇಗಿ ಅವರಿಗೆ 105 ವರ್ಷ ವಯಸ್ಸಾಗಿತ್ತು.

ಜುಲೈ 1, 1917ರಂದು ಜನಿಸಿದ ನೇಗಿ ಅವರು, ಶಾಲಾ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದರು. 1952ರಿಂದ ಪ್ರತಿ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಭಾರತ ಸ್ವತಂತ್ರಗೊಂಡ ನಂತರ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿದ್ದು 1952ರಲ್ಲಿ. ಆದರೆ, ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಚುನಾವಣೆ ವೇಳೆ ಭಾರೀ ಹಿಮಪಾತವಾಗುವ ಸಾಧ್ಯತೆ ಇತ್ತು. ಆದ್ದರಿಂದ, ಕಿನ್ನೌರ್ ನಲ್ಲಿ, ಆರು ತಿಂಗಳ ಹಿಂದೆ 1951 ರಲ್ಲಿಯೇ ಮತಗಳನ್ನು ಚಲಾಯಿಸಲಾಯಿತು ಮತ್ತು ಮಾಸ್ಟರ್ ನೇಗಿ ಅವರು ಮೊದಲ ಮತ ಚಲಾಯಿಸಿದರು.

ಕೊನೆಯ ಬಾರಿಗೆ ನೇಗಿ ಅವರು ಇತ್ತೀಚೆಗೆ ನಡೆದ ಹಿಮಾಚಲ ಚುನಾವಣೆಯಲ್ಲಿ ನವೆಂಬರ್ 2, 2022 ರಂದು ತಮ್ಮ ಹಕ್ಕು ಚಲಾಯಿಸಿದ್ದರು. ಇದೇ ಅವರ ಕೊನೆ ಮತದಾನ.