ನಕಲಿ ಕೀ ಬಳಸಿ ನಿರ್ಮಾಪಕನ ಮನೆಗೆ ಕನ್ನ ಹಾಕಿದ್ದ ಖದೀಮರ ಬಂಧನ!

80
firstsuddi

ಬೆಂಗಳೂರು : ನಕಲಿ ಕೀ ಬಳಸಿ ಸ್ಯಾಂಡಲ್ ವುಡ್ ನಿರ್ಮಾಪಕ ರಮೇಶ್ ಕಶ್ಯಪ್ ರವರ ಮನೆಗೆ ಕನ್ನ ಹಾಕಿದ್ದ ಇಬ್ಬರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರ್(32), ಅಭಿಷೇಕ್ (34) ಬಂಧಿತ ಆರೋಪಿಗಳು. ಬಂಧಿತರಲ್ಲಿ ಓರ್ವ ಆರೋಪಿ ನಿರ್ಮಾಪಕನ ಕಾರು ಚಾಲಕ ಎಂದು ತಿಳಿದು ಬಂದಿದೆ.

ಜುಲೈ 10 ರಂದು ನಿರ್ಮಾಪಕ ರಮೇಶ್ ಕಶ್ಯಪ್ ಅವರ ಹನುಮಂತನಗರದ ನಿವಾಸಕ್ಕೆ ನುಗ್ಗಿದ ಕಳ್ಳರು 3 ಲಕ್ಷ ರೂಪಾಯಿ ನಗದು, 710 ಗ್ರಾಂ. ಚಿನ್ನಾಭರಣ ದೋಚಿದ್ದರು. ಈ ಸಂಬಂಧ ನಿರ್ಮಾಪಕ ಕಶ್ಯಪ್ ಹನುಮಂತನಗರ ಠಾಣೆಗೆ ದೂರು ನೀಡಿದ್ದರು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹೀಗಾಗಿ ಸಿಸಿಟಿವಿ ಹಾಗೂ ಚಂದ್ರಶೇಖರ್ ನ ಟವರ್ ಲೊಕೇಶನ್ ಆಧರಿಸಿ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಆರೋಪಿ ಚಂದ್ರ ಶೇಖರ್, ಕಶ್ಯಪ್ ಅವರ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಕಶ್ಯಪ್ ಅವರ ಮನೆಯ ಕೀ ತೆಗೆದುಕೊಂಡು ಹೋಗಿ ನಕಲಿ ಕೀ ಮಾಡಿಸಿಕೊಂಡಿದ್ದ. ಜುಲೈ 10 ರಂದು ಕಶ್ಯಪ್ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸ್ನೇಹಿತ ಅಭಿಷೇಕ್ ಅನ್ನು ಮುಂದೆ ಬಿಟ್ಟು ಕಳ್ಳತನ ಮಾಡಿಸಿದ್ದ. ಕದ್ದ ಚಿನ್ನಾಭರಣವನ್ನ ಅಡವಿಟ್ಟು ಹಣ ಪಡೆದು ದಿಲ್ ದಾರ್ ಲೈಫ್ ನಡೆಸುತ್ತಿದ್ದರು. ಇದೀಗ ಆರೋಪಿಗಳನ್ನು ಬಂಧಿಸಿದ್ದು, ಅವರ ಬಳಿ ಇದ್ದ 3 ಲಕ್ಷ ನಗದನ್ನು ವಶ ಪಡೆದುಕೊಂಡಿದ್ದಾರೆ.