ನಕಲಿ ಮದ್ಯ ಸೇವಿಸಿ ಮೂವರು ಮಹಿಳೆಯರು ಸೇರಿದಂತೆ 10 ಮಂದಿ ಸಾವು…

64
firstsuddi

ಚೆನ್ನೈ: ನಕಲಿ ಮದ್ಯ ಸೇವಿಸಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು 10 ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವಿಲ್ಲುಪುರಂ ಹಾಗೂ ಚೆಂಗಲ್‌ಪೇಟ್ ಜಿಲ್ಲೆಗಳಲ್ಲಿ ನಡೆದಿದೆ.

ವಿಲ್ಲುಪುರಂ ಜಿಲ್ಲೆಯ ಮರಕ್ಕನಂ ಪ್ರದೇಶದಲ್ಲಿ 6 ಜನರು ಸಾವನ್ನಪ್ಪಿದ್ದು, 30 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ಸಂಜೆಯ ವೇಳೆಗೆ ಚೆಂಗಲ್‌ಪೇಟ್ ಜಿಲ್ಲೆಯ ಮಧುರಾಂತಕಂ ಬಳಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪೊಲೀಸ್ ಮಹಾನಿರೀಕ್ಷಕ (ಉತ್ತರ) ಎನ್ ಕಣ್ಣನ್ ಅವರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಎಲ್ಲಾ 10 ಸಂತ್ರಸ್ತರು ಎಥೆನಾಲ್-ಮೆಥೆನಾಲ್ ಪದಾರ್ಥಗಳೊಂದಿಗೆ ಮದ್ಯವನ್ನು ಸೇವಿಸಿದ್ದಾರೆ ಎಂದು ಹೇಳಿದರು. ನಕಲಿ ಮದ್ಯ ಸೇವನೆಯಿಂದ ಮೃತಪಟ್ಟಿರುವ ಎರಡು ಪ್ರತ್ಯೇಕ ಘಟನೆಗಳು ವರದಿಯಾಗಿವೆ ಮತ್ತು ಇದುವರೆಗೆ ಎರಡು ಘಟನೆಗಳ ನಡುವಿನ ಸಂಬಂಧದ ಯಾವುದೇ ಪುರಾವೆಗಳು ಪೊಲೀಸರಿಗೆ ಸಿಕ್ಕಿಲ್ಲ.

ವರದಿಗಳ ಪ್ರಕಾರ ಮರಕ್ಕನಂ ಬಳಿಯ ಎಕ್ಕಿಯಾರ್ ಕುಪ್ಪಂನ ನಿವಾಸಿಗಳು ಶನಿವಾರ ಸಂಜೆ ನಕಲಿ ಮದ್ಯ ಸೇವಿಸಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಹಲವರು ವಾಂತಿಭೇದಿ, ಕಣ್ಣುಗಳಲ್ಲಿ ಉರಿ, ತಲೆ ಸುತ್ತುವಿಕೆಯಿಂದ ಆರು ಮಂದಿಯನ್ನು ಪುದುಚೇರಿ ಮತ್ತು ವಿಲ್ಲುಪುರಂನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಆಸ್ಪತ್ರೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಮತ್ತೊಂದು ಗ್ರಾಮದಿಂದಲೂ ಸಾವಿನ ಸುದ್ದಿಗಳು ಕೇಳಿ ಬಂದಿದೆ. ಇನ್ನೂ ಹಲವು ಪ್ರದೇಶದ ವಿವಿಧ ಆಸ್ಪತ್ರೆಗಳಿಗೆ ಜನರು ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಮ್ರಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಕೆಲವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮೃತರ ಕುಟುಂಬಗಳಿಗೆ ಸರ್ಕಾರ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.