ಶಿವಮೊಗ್ಗ : ಸ್ಯಾಂಡಲ್ವುಡ್ ನಟ ವಿಜಯ ರಾಘವೇಂದ್ರ ಅವರ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿ ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ. ಖಾಸಗಿ ಕೆಲಸದ ಸಲುವಾಗಿ ಶಿವಮೊಗ್ಗಕ್ಕೆ ಆಗಮಿಸಿದ ನಟ ವಿಜಯ ರಾಘವೇಂದ್ರ ಅವರು ನಗರದ ಭಾರ್ಗವಿ ಪೆಟ್ರೋಲ್ ಬಂಕ್ನಲ್ಲಿ ತಮ್ಮ ಕಾರಿಗೆ ಪೆಟ್ರೋಲ್ ಹಾಕಿಸಿದ್ದಾರೆ. ಆದರೆ ಬಂಕ್ ಸಿಬ್ಬಂದಿ ನಟನನ್ನು ನೋಡುವ ಭರದಲ್ಲಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿ ಎಡವಟ್ಟು ಮಾಡಿದ್ದಾರೆ. ಇದರಿಂದ ಕಾರಿನ ಇಂಜಿನ್ ಲಾಕ್ ಆಗಿ ಕಾರು ಓಡಿಸಲಾಗದಂತಾಗಿದೆ. ತಪ್ಪಿನ ಅರಿವಾಗುತ್ತಿದ್ದಂತೆ ಕೂಡಲೇ ಎಚ್ಚೆತ್ತುಕೊಂಡ ಪೆಟ್ರೋಲ್ ಬಂಕ್ ಮಾಲೀಕ ಹಾಗೂ ಸಿಬ್ಬಂದಿ ವಿಜಯ ರಾಘವೇಂದ್ರ ಅವರ ಬಳಿ ಕ್ಷಮೆ ಕೇಳಿದ್ದಾರೆ. ಬಳಿಕ ಕಾರನ್ನು ರಿಪೇರಿಗೆ ಕಳುಹಿಸಿದ್ದಾರೆ. ಕೊನೆಗೆ ವಿಜಯ ರಾಘವೇಂದ್ರ ಅವರು ಬೇರೆ ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡಿದ್ದಾರೆ.











