ಚೆನ್ನೈ : ಚಾರ್ಜ್ ಹಾಕಿದ್ದ ಮೊಬೈಲ್ ಸ್ಪೋಟಗೊಂಡು ಮಹಿಳೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ತಮಿಳುನಾಡಿನ ಕರೂರು ಪಟ್ಟಣ ಸಮೀಪದ ರಾಯನೂರು ಗ್ರಾಮದಲ್ಲಿ ನಡೆದಿದೆ. ಮುತ್ತುಲಕ್ಷ್ಮಿ(29) ಹಾಗೂ 2 ವರ್ಷದ ಇಬ್ಬರು ಅವಳಿ ಮಕ್ಕಳು ಮೃತ ದುರ್ದೈವಿಗಳು. ನಗರದಲ್ಲಿ ಟೀ ಸ್ಟಾಲ್ ಸ್ಟಾಲ್ ನಡೆಸುತ್ತಿದ್ದ ಮಹಿಳೆ ನಿನ್ನೆ ರಾತ್ರಿ ಮೊಬೈಲ್ ಚಾರ್ಜ್‍ಗೆ ಇಟ್ಟು ಮಕ್ಕಳೊಂದಿಗೆ ಮಲಗಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಮೊಬೈಲ್ ಸ್ಪೋಟಗೊಂಡ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯಲ್ಲಿ ಹೊಗೆಯಿಂದ ಗಂಭೀರವಾಗಿ ಅಸ್ವಸ್ತಗೊಂಡ ಇಬ್ಬರು ಮಕ್ಕಳು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಮನೆಯಿಂದ ಹೊಗೆ ಬರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.










