ವಿಜಯಪುರ: ಭೀಮಾ ನದಿಗೆ ಬಟ್ಟೆ ತೊಳೆಯಲೆಂದು ಹೋಗಿದ್ದ ತಾಯಿ ಮತ್ತು ಇಬ್ಬರು ಮಕ್ಕಳು ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು 38 ವರ್ಷದ ಗೀತಾ ಹೊನ್ನೂರ, ಮಕ್ಕಳಾದ 12 ವರ್ಷದ ಶೋಭಿತಾ, 10 ವರ್ಷದ ವಾಸುದೇವ ಎಂದು ಗುರುತಿಸಲಾಗಿದೆ. ಬಟ್ಟೆ ತೊಳೆಯಲೆಂದು ಗೀತಾ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಭೀಮಾ ನದಿ ತೀರಕ್ಕೆ ಹೋಗಿದ್ದರು. ಈ ವೇಳೆ ನದಿ ದಂಡೆ ಮೇಲೆ ಸ್ನಾನ ಮಾಡುತ್ತಿದ್ದಾಗ ವಾಸುದೇವ ಜಾರಿ ಬಿದ್ದಿದ್ದು, ತಮ್ಮನನ್ನು ರಕ್ಷಿಸಲು ಶೋಭಾ ಇಳಿದಿದ್ದಾಳೆ. ಇಬ್ಬರೂ ಮುಳುಗುತ್ತಿರುವುದನ್ನು ನೋಡಿ ತಾಯಿ, ಮಕ್ಕಳ ರಕ್ಷಣೆಗೆ ಮುಂದಾಗಿದ್ದಾಳೆ. ಆದರೆ, ಈಜು ಗೊತ್ತಿರದ ಕಾರಣ ತಾಯಿ ಮತ್ತು ಮಕ್ಕಳು ಮೂವರೂ ನೀರು ಪಾಲಾಗಿದ್ದಾರೆ.
ಘಟನೆ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










