ನವದೆಹಲಿ : ನಾನು ಯಾರಿಗೂ ನೋವು ಮಾಡಲು ಬಯಸುವುದಿಲ್ಲ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ ನನ್ನನ್ನು ಕ್ಷಮಿಸಿ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಿನ್ನೆಯೇ ಬೆಂಗಳೂರಿಗೆ ತೆರಳಬೇಕಿತ್ತು. ಆದರೆ ನಾನು ವಕೀಲರನ್ನು ಭೇಟಿ ಮಾಡಬೇಕಿತ್ತು. ಹಾಗಾಗಿ ಇಂದು ಬೆಂಗಳೂರಿಗೆ ಹೊರಟಿದ್ದೇನೆ. ನಿನ್ನೆ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದೇನೆ. ಇಂದು ವಕೀಲರಾದ ಮುಕುಲ್ ರೋಹ್ಟಗಿ, ಕಪಿಲ್ ಸಿಬಲ್ ಹಾಗೂ ಮತ್ತಿತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ನನ್ನನ್ನು ಸಾಕಿದವರು, ಕಷ್ಟ ಕಾಲದಲ್ಲಿ ನನ್ನ ಪರ ಹೋರಾಟ ಮಾಡಿದವರು, ನನಗಾಗಿ ಪೂಜೆ ಮಾಡಿಸಿದವರನ್ನು ಭೇಟಿ ಮಾಡಬೇಕಿದೆ. ಎಲ್ಲರನ್ನೂ ವೈಯಕ್ತಿಕವಾಗಿ ಭೇಟಿ ಮಾಡಲು ಸಾಧ್ಯವಾಗದೆ ಇದ್ದರೂ, ಸಾಧ್ಯವಾದಷ್ಟು ಜನರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ. ಜನರು ನನ್ನ ಮೇಲೆ ತೋರಿಸಿರುವ ಪ್ರೀತಿಗೆ ನಾನು ಆಭಾರಿ. ಅವರ ಋಣ ತೀರಿಸಲು ಪ್ರಯತ್ನಿಸುತ್ತೇನೆ ಎಂದರು. ನನ್ನ ತಾಯಿ ಮತ್ತು ಪತ್ನಿಗೆ ಇಡಿ ಅಧಿಕಾರಿಗಳು ನೋಟಿಸ್ ನೀಡಿರುವ ಕುರಿತು ಅ.30ರಂದು ದೆಹಲಿಯಲ್ಲಿ ವಿಚಾರಣೆ ಇದೆ. ಅಂದು ನಾನಾಗಲಿ ನನ್ನ ತಮ್ಮನಾಗಲಿ ಬರಬೇಕು. ಮಾಧ್ಯಮದವರು ಕೂಡಾ ನನ್ನ ಬಗ್ಗೆ ಅಪಾರ ಕಾಳಜಿ ತೋರಿಸಿದ್ದಾರೆ. ಕೆಲವರು ಅಪಪ್ರಚಾರವನ್ನು ಮಾಡಿದ್ದಾರೆ. ವರದಿ ಮಾಡಲು ಮಾಧ್ಯಮಗಳಿಗೆ ಸ್ವಾತಂತ್ರ್ಯ ಇದೆ. ಆದರೆ ತೇಜೋವಧೆ ಮಾಡಬೇಡಿ, ವೃತ್ತಿಯ ಮೌಲ್ಯಗಳನ್ನು ಕಾಪಾಡಿಕೊಳ್ಳಿ. ನನ್ನಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ. ಯಾರನ್ನೂ ನೋಯಿಸುವ ಉದ್ದೇಶ ನನ್ನದಲ್ಲ ಎಂದರು.










