ಭೋಪಾಲ್ : ನರ್ಸಿಂಗ್ ಓದುತ್ತಿದ್ದ ಯುವತಿಯೋರ್ವಳಿಗೆ ಮುಸ್ಲಿಂ ಯುವಕನೊಬ್ಬ ಇಸ್ಲಾಂಗೆ ಮತಾಂತರಗೊಂಡು ಮದುವೆಯಾಗದಿದ್ದರೆ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಆರೋಪಿಯನ್ನು ಬಂಧಿಸುವಲ್ಲಿ ಮಧ್ಯಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.
19 ವರ್ಷದ ವಿದ್ಯಾರ್ಥಿನಿ ಹಾಗೂ ಆರೋಪಿ 22 ವರ್ಷದ ಮೋನು ಮನ್ಸೂರಿ ಇಬ್ಬರೂ ಒಂದೇ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಆಕೆಯ ನಂಬರ್ ನ್ನು ಹೇಗೋ ಪಡೆದುಕೊಂಡಿದ್ದ ಮನ್ಸೂರಿ ಅದಾದ ಬಳಿಕ ವಾಟ್ಸಪ್ ನಲ್ಲಿ ಮೆಸೇಜ್ ಮಾಡಿ, ಮದುವೆ ಪ್ರಸ್ತಾಪವನ್ನು ಇಟ್ಟಿದ್ದ. ಅಷ್ಟೇ ಅಲ್ಲದೇ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕು. ಅದನ್ನು ನಿರಾಕರಿಸಿದರೆ ಆ್ಯಸಿಡ್ ದಾಳಿ ಮಾಡುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ವಿದ್ಯಾರ್ಥಿನಿ ಹಿಂದೂ ಸಂಘಟನೆಗಳ ಸಹಾಯ ಪಡೆದು ಪೊಲೀಸರಿಗೆ ದೂರು ನೀಡಿದ್ದಾಳೆ.
ದೂರಿನಲ್ಲಿ ಆಕೆ, ಮೋನು ಮನ್ಸೂರಿ ನಾನು ಕಾಲೇಜಿಗೆ ಹೋಗುವಾಗ ಪ್ರತಿನಿತ್ಯ ನಮ್ಮ ಊರಿನಿಂದ ನನ್ನನ್ನು ಹಿಂಬಾಲಿಸುತ್ತಿದ್ದನು. ಒಂದು ದಿನ ನನ್ನನ್ನ ಕೈಹಿಡಿದು ನನ್ನ ಮೇಲೆ ಹೂ ಎಸೆದಿದ್ದ. ಇದರಿಂದ ಭಯಗೊಂಡು ನಾನು ಕೂಗಿದ್ದೆ. ಆದರೆ ಆತ ಕೋಪಗೊಂಡು ಮದುವೆಗೆ ನಿರಾಕರಿಸಿದರೆ ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿದ್ದ ಎಂದು ತಿಳಿಸಿದ್ದಾಳೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೋನು ಮನ್ಸೂರಿಯನ್ನು ಬಂಧಿಸಿದ್ದಾರೆ.










