ನಮ್ಮ ಕಂಡಕ್ಟರ್ ಮೇಲೆ ಬೇಕು ಅಂತಾನೆ ಪೋಕ್ಸೋ ಕೇಸ್ ಕೊಟ್ಟಿದ್ದಾರೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ.

84

ಬೆಳಗಾವಿ: ನಮ್ಮ ಕಂಡಕ್ಟರ್ ಮಹಾದೇವ ಹುಕ್ಕೇರಿ ಮೇಲೆ ಬೇಕು ಅಂತಾನೇ ಪೋಕ್ಸೋ ಕೇಸ್ ಕೊಟ್ಟಿದ್ದಾರೆ. ಅವತ್ತು ಬಸ್‍ನಲ್ಲಿ ಒಬ್ಬರು ಇಬ್ಬರು ಇರಲಿಲ್ಲ. 90 ಜನ ಪ್ರಯಾಣಿಸುತ್ತಿದ್ದರು. ನೋಡೋಣ ಆ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮಹಾದೇವ ಎನ್ನುವ ಕಂಡಕ್ಟರ್ ಕಳೆದ 5 ವರ್ಷಗಳಿಂದ ಅದೇ ರೂಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವತ್ತು ಇಬ್ಬರು ಹುಡುಗ ಹುಡುಗಿ ಬಸ್‍ನಲ್ಲಿ ಹತ್ತಿದ್ದರು. ಇಬ್ಬರೂ ಅಪ್ರಾಪ್ತರು. ಹುಡುಗ ಕೂಡ ಜಿರೋ ಟಿಕೆಟ್ ತೆಗೆದುಕೊಂಡು ಪ್ರಯಾಣಿಸಿದ್ದಾರೆ. ಆಗ ಕಂಡಕ್ಟರ್ ಕನ್ನಡದಲ್ಲಿ ಕೇಳಿದ್ದಾರೆ. ಅವರು ಮರಾಠಿಯಲ್ಲಿ ಮಾತನಾಡಿದ್ದಾರೆ. ಕಂಡಕ್ಟರ್‍ಗೆ ಮರಾಠಿ ಬರುವುದಿಲ್ಲ. ಅವರಿಗೆ ಕನ್ನಡ ಬರುವುದಿಲ್ಲವಂತೆ. ಹೀಗೆ ಮಾತಿಗೆ ಮಾತು ಬೆಳೆದಿದೆ. ಫೋನ್ ಮಾಡಿ ಮುಂದಿನ ನಿಲ್ದಾಣದಲ್ಲಿ ಅವರ ಕಡೆಯವರನ್ನು ಕರೆಸಿ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಿವರಿಸಿದರು.
ಬಾಳೇಕುಂದ್ರಿ ಬಳಿ ಮಧ್ಯಾಹ್ನ 1 ಗಂಟೆಗೆ ಘಟನೆ ನಡೆದಿದೆ. ಆಮೇಲೆ ನಮ್ಮ ಇಲಾಖೆಯವರು ದೂರು ಕೊಟ್ಟ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೂ ಅವರನ್ನು ಒಪ್ಪಿಸಿದ್ದಾರೆ. ಮಾರನೇ ದಿನ ಕಂಡಕ್ಟರ್ ಮೇಲೆ ಬೇಕು ಅಂತಾನೇ ಪೋಕ್ಸೋ ಕೇಸ್ ಕೊಟ್ಟಿದ್ದಾರೆ ಎಂದು ರಾಮಲಿಂಗಾರೆಡ್ಡಿ ಅವರು ಹೇಳಿದರು.
ಟಿ.ಎ. ನಾರಾಯಣಗೌಡರು ಮಂಗಳವಾರ ಬೆಳಗಾವಿಗೆ ಬಂದು ಪ್ರತಿಭಟನೆ ನಡೆಸುವ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಸಚಿವರು ಬಸ್‍ನಲ್ಲಿ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತವೆ. ಆದರೆ, ಇದು ಭಾಷೆ ವಿಚಾರದಲ್ಲಿ ಗಲಾಟೆ ಮಾಡಿದ್ದಾರೆ. ಆದ್ದರಿಂದ ರಕ್ಷಣಾ ವೇದಿಕೆ ಸೇರಿ ವಿವಿಧ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಅವರು ಬೇಕಾದಷ್ಟು ಮಾತೃ ಭಾಷೆ ಮಾತನಾಡಲಿ. ಆದರೆ, ನಮ್ಮ ಆಡಳಿತ ಭಾಷೆ ಕನ್ನಡ. ಹಾಗಾಗಿ, ಅಗತ್ಯವಾಗಿ ಎಲ್ಲರೂ ಕನ್ನಡ ಕಲಿಯಬೇಕು ಎಂದು ಹೇಳಿದರು.
ಗಡಿ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಇಲ್ಲ. ನಮ್ಮ ಗಡಿ ನಮ್ಮದು, ಅವರ ಗಡಿ ಅವರದಷ್ಟೇ. ನಾನು ಘಟನೆ ಬಗ್ಗೆ ಮಾತನಾಡಿದ್ದೇನೆ. ಇಲ್ಲಿಯ ರಾಜಕಾರಣಿಗಳನ್ನು ನೀವು ಕೇಳಿಲ್ಲ. ಹಾಗಾಗಿ, ಅವರು ಮಾತನಾಡಿಲ್ಲ ಎಂದು ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡರು. “ಸಾರಿಗೆ ಇಲಾಖೆ ಕಾರ್ಯದರ್ಶಿ ಪ್ರಸಾದ ಅವರಿಗೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆಗೆ ಮಾತನಾಡುವಂತೆ ತಿಳಿಸಿದ್ದೇನೆ. ಅದೇ ರೀತಿ ಮೊನ್ನೆ ಮಹಾರಾಷ್ಟ್ರ ಸಚಿವರು ಬೆಂಗಳೂರಿಗೆ ಬಂದಿದ್ದರು. ನೋಡೋಣ ಇವತ್ತು ಮಹಾರಾಷ್ಟ್ರಕ್ಕೆ ಬಸ್ ಬಿಡುವ ಬಗ್ಗೆ ಮಾತನಾಡುತ್ತೇನೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.