ಚಿಕ್ಕಮಗಳೂರು: ನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಕನ್ನಡಿಗರು ಸ್ವಾಭಿಮಾನಿಗಳಾಗಬೇಕು ಎಂದು ಸಾಹಿತಿ ಸುಧೀರ್‌ಕುಮಾರ್ ಮುರೊಳ್ಳಿ ಸಲಹೆ ಮಾಡಿದರು.
ನಗರದ ಬಿ.ಜಿ.ಎಸ್ ಪದವಿಪೂರ್ವ ಕಾಲೇಜಿನಲ್ಲಿ ಇಂದು ಏರ್ಪಡಿಸಿದ್ದ ಕನ್ನಡರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸರ್ಕಾರ, ಸಂಘ ಸಂಸ್ಥೆಗಳು, ಕಾನೂನು ಅಥವಾ ಶಾಸನಗಳಿಂದ ಕನ್ನಡ ಭಾಷೆ ಉಳಿಯುವುದಿಲ್ಲ. ಕನ್ನಡಿಗರು ಸ್ವಾಭಿಮಾನಿಗಳಾಗಿ ತಮ್ಮ ದೈನಂದಿನ ವ್ಯವಹಾರಗಳಲ್ಲಿ ಮಾತೃಭಾಷೆಯನ್ನು ಕಡ್ಡಾಯವಾಗಿ ಬಳಸಿದಾಗ ಮಾತ್ರ ಅದು ಮುಂದಿನ ತಲೆಮಾರಿಗೆ ಉಳಿಯುತ್ತದೆ ಎಂದು ಕಿವಿ ಮಾತು ಹೇಳಿದರು.
ತಮಿಳರು, ತೆಲುಗರು, ಕೇರಳಿಗರು, ಉತ್ತರ ಭಾರತೀಯರು ಅತ್ಯಂತ ಸ್ವಾಭಿಮಾನಿಗಳು ಅವರು ಎಲ್ಲರಿಗೂ ತಮ್ಮ ಮಾತೃಭಾಷೆಯಲ್ಲೇ ಉತ್ತರಿಸುತ್ತಾರೆ ಎಂದ ಅವರು, ಕನ್ನಡಿಗರು ಅವರನ್ನು ಮಾದರಿಯಾಗಿ ತೆಗೆದುಕೊಂಡು ಕನ್ನಡದಲ್ಲೇ ವ್ಯವಹರಿಸಬೇಕು ಎಂದು ಮನವಿ ಮಾಡಿದರು.
ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಗಾಯಕ ಮಲ್ಲಿಗೆ ಸುಧೀರ್ ಮಾತನಾಡಿ, ಎಲ್ಲಿಯವರೆಗೆ ನಾವು ಮಾತೃಭಾಷೆಯಲ್ಲಿ ವ್ಯವಹರಿಸುವುದಿಲ್ಲವೋ ಅಲ್ಲಿಯವರೆಗೂ ರಾಜ್ಯದಲ್ಲಿ ಕನ್ನಡ ಬೆಳೆಯುವುದಿಲ್ಲ ಎಂದರು.
ಕನ್ನಡಿಗರಾದ ನಾವೇ ಮಾತೃಭಾಷೆಯನ್ನು, ಈ ನೆಲದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳೆಸದಿದ್ದರೆ ಅದು ಹೇಗೆ ಬೆಳೆಯುತ್ತದೆ ಮುಂದಿನ ಪೀಳಿಗೆಗೆ ಹೇಗೆ ಉಳಿಯುತ್ತದೆ ಎಂದು ಪ್ರಶ್ನಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಜಿ.ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜೆ.ಜಿ.ಸುರೇಂದ್ರ, ವಿದ್ಯಾರ್ಥಿಗಳಲ್ಲಿ ನಾಡು-ನುಡಿ ನೆಲ, ಜಲ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಹಾಗೂ ಅಭಿಮಾನವನ್ನು ಮೂಡಿಸುವ ನಿಟ್ಟಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಉಪನ್ಯಾಸಕ ರಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಗಾಯಕ ಮಲ್ಲಿಗೆ ಸುಧೀರ್ ಅವರಿಂದ ನಡೆದ ಕನ್ನಡ ಗೀತೆಗಳ ಗಾಯನ ಗಮನ ಸೆಳೆಯಿತು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿಗಳಾದ ವೈಷ್ಣವಿ ಮತ್ತು ಸುಧೀರ್ ಕಾರ್ಯಕ್ರಮವನ್ನು ನಿರೂಪಿಸಿದರು. ಯಶಸ್ವಿನಿ ಸ್ವಾಗತಿಸಿದರು. ಶಕ್ತಿಧರ ವಂದಿಸಿದರು.










