ಧರ್ಮಸ್ಥಳ : ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಮುದ್ದಹನುಮೇಗೌಡ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಿಂತು ನಾನು ರಾಜ್ಯದ ಜನತೆಗೆ ಸ್ಪಷ್ಟಪಡಿಸುತ್ತೇನೆ. ನಾನು ನಿರೀಕ್ಷೆ ಮೀರಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಕ್ರಿಯಾಶೀಲನಾಗಿ ಕೆಲಸ ಮಾಡಿದ್ದರೂ 2019ರ ಲೋಕಸಭಾ ಚುನಾವಣೆಯಲ್ಲಿ ನನಗೆ ಅವಕಾಶ ಸಿಗಲಿಲ್ಲ. ಮೈತ್ರಿ ಧರ್ಮದಂತೆ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟರು. ಆದರೂ ನಾನು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದೆ. ಮೈತ್ರಿ ಅನಿವಾರ್ಯತೆಯ ಬಗ್ಗೆ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಹಾಗೂ ವೇಣುಗೋಪಾಲ್ ಅವರು ಸೇರಿ ನನಗೆ ಮನವರಿಕೆ ಮಾಡಿದ್ದಕ್ಕೆ ನಾನು ತ್ಯಾಗ ಮಾಡಿದೆ. ಇದರಂತೆ ನಾನು ಪ್ರಚಾರ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದೇನೆ. ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ನಾನು ನಾಮಪತ್ರ ವಾಪಸ್ ಪಡೆಯಲು ಕೋಟಿ ರೂ. ಹಣವನ್ನು ಪಡೆದಿದ್ದೇನೆ ಎನ್ನಲಾದ ಸಂಭಾಷಣೆ ಬಿಡುಗಡೆಯಾಯಿತು. ನನ್ನ ಬಗ್ಗೆ ವಿಕೃತ ಮನಸ್ಸನ್ನು ಹೊಂದಿರುವವರಿಂದ ಈ ಕೃತ್ಯ ನಡೆದಿದೆ. ಅವರಿಗೆ ದೇವರು ಒಳ್ಳೆಯ ಮನಸ್ಸು ಕೊಡಲಿ. ನಾನು ಯಾವ ಪಕ್ಷದವರಿಂದಲೂ ಹಣ ಪಡೆದುಕೊಂಡಿಲ್ಲ. ಯಾವುದೇ ಹಣ ಪಡೆಯದೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದೇನೆ. ನನ್ನ ರಾಜಕೀಯ ಬೆಳವಣಿಗೆ ಸಹಿಸದೆ ಈ ರೀತಿ ಆರೋಪ ಮಾಡಿದ್ದಾರೆ. ಇದರಿಂದ ರಾಜ್ಯದ ಜನತೆ ನನ್ನನ್ನು ಅನುಮಾನದಿಂದ ಕಾಣುತ್ತಿದ್ದಾರೆ. ಹೀಗಾಗಿ ನಾನು ಈ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲೇ ಸುದ್ದಿಗೋಷ್ಟಿ ನಡೆಸಿ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು.










