ಪಲಕ್ಕಾಡ್ : ನಾಯಿ ಕಡಿತಕ್ಕೊಳಗಾದ ಒಂದೇ ತಿಂಗಳಿಗೆ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.
ಪಲಕ್ಕಾಡ್ ಮೂಲದ ಶ್ರೀಲಕ್ಷ್ಮೀ ಮೃತ ವಿದ್ಯಾರ್ಥಿನಿ. ಕೊಯಮತ್ತೂರಿನ ಕಾಲೇಜಿನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಪದವಿ ಓದುತ್ತಿದ್ದಳು. ಶ್ರೀಲಕ್ಷ್ಮಿ ಮೇ 30 ರಂದು ಕಾಲೇಜಿಗೆ ತೆರಳುತ್ತಿದ್ದಾಗ ಪಕ್ಕದ ಮನೆಯ ನಾಯಿ ಆಕೆಗೆ ಕಚ್ಚಿತ್ತು. ಆ ನಂತರ ಯುವತಿ ಆರೋಗ್ಯ ಇಲಾಖೆ ಸೂಚನೆಯಂತೆ ಆ್ಯಂಟಿ ರೇಬಿಸ್ ಲಸಿಕೆಯನ್ನು ಹಾಕಿಸಿಕೊಂಡರು. ಆರಂಭದಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲ.
ಇತ್ತೀಚೆಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶ್ರೀಲಕ್ಷ್ಮೀ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಪರೀಕ್ಷಿಸಿದಾಗ ರೇಬೀಸ್ ಕಾಯಿಲೆಯ ಲಕ್ಷಣಗಳಿರುವುದು ಕಂಡುಬಂದಿತ್ತು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಲಕ್ಷಣಗಳು ಹೆಚ್ಚಾಗಿದ್ದರಿಂದ ತಕ್ಷಣ ಆಕೆಯನ್ನು ತ್ರಿಸ್ಸೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಕೊನೆಯುಸಿರೆಳೆದಿದ್ದಾಳೆ.










