ನವದೆಹಲಿ : ಸಾರ್ವಜನಿಕ ವಲಯದ ಬ್ಯಾಂಕ್ ಗಳ ಖಾಸಗೀಕರಣವನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಮಾರ್ಚ್ 15 ಮತ್ತು 16ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಹೀಗಾಗಿ ಬ್ಯಾಂಕ್ ಗಳಿಗೆ ನಾಲ್ಕು ದಿನ ಸಾಲು ಸಾಲು ರಜೆ ಇರಲಿದೆ.
ಬ್ಯಾಂಕಿಂಗ್ ಕೆಲಸಗಳನ್ನು ಮುಗಿಸಿಕೊಳ್ಳುವುದಕ್ಕೆ ಗ್ರಾಹಕರಿಗೆ ಉಳಿದಿರುವುದು ಕೇವಲ ಇಂದು ಒಂದೇ ದಿನ ಮಾತ್ರ. ಇಂದು ಕೈ ತಪ್ಪಿದರೆ ಇನ್ನೂ ನಾಲ್ಕು ದಿನಗಳ ಕಾಲ ಯಾವುದೇ ಬ್ಯಾಂಕಿಂಗ್ ಸೇವೆಗಳು ಸಿಗುವುದು ಅನುಮಾನವಾಗಿದೆ.
ಕಳೆದ ಫೆಬ್ರವರಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದರು. ದೇಶದಲ್ಲಿ 1.75 ಲಕ್ಷ ಕೋಟಿ ರೂ. ಗಳಿಸುವ ಸರ್ಕಾರದ ಹೂಡಿಕೆಯ ಭಾಗವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದಾಗಿ ಘೋಷಿಸಿದ್ದರು. ಕೇಂದ್ರವು ಕಳೆದ ವರ್ಷ 10 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ನಾಲ್ಕು ಬ್ಯಾಂಕ್ ಗಳೊಂದಿಗೆ ವಿಲೀನಗೊಳಿಸಿತ್ತು. 2017ರಲ್ಲಿ 27 ಇದ್ದ ಸಾರ್ವಜನಿಕರ ಬ್ಯಾಂಕ್ ಗಳ ಸಂಖ್ಯೆಯು ಮಾರ್ಚ್ ವೇಳೆಗೆ 12ಕ್ಕೆ ಇಳಿಸಿತು.
ಮಾರ್ಚ್.15 ಮತ್ತು 16ರಂದು ಬ್ಯಾಂಕ್ ನೌಕರರ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ನಾಳೆ 2ನೇ ಶನಿವಾರ ಹಾಗೂ ಭಾನುವಾರ ರಜೆ ಇರುವುದರಿಂದ ಸೋಮವಾರ ಮತ್ತು ಮಂಗಳವಾರ ಮುಷ್ಕರ ನಡೆಯಲಿದೆ. ಹಾಗಾಗಿ ಯಾವುದೇ ಬ್ಯಾಂಕ್ ಕೆಲಸಗಳಿದ್ದರೂ ಇಂದೇ ಮುಗಿಸಿಕೊಳ್ಳುವುದು ಒಳ್ಳೆಯದು.










